ಫಿಫಾ ವಿಶ್ವಕಪ್ 2018: ರಷ್ಯಾಗೆ ಸೈಕಲ್ ಸವಾರಿ ಮಾಡಿದ ಕೇರಳ ಫುಟ್ಬಾಲ್ ಅಭಿಮಾನಿ
ಭಾರತ ತಂಡ ಫುಟ್ಬಾಲ್ ಕ್ರೀಡೆಯಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕೆಲ ಕಾಲ ಕಾಯಬೇಕು. ಹಾಗಂತ ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನು ಕೊರತೆ ಇಲ್ಲ. ಇದೀಗ ಕೇರಳ ಫುಟ್ಬಾಲ್ ಅಭಿಮಾನಿ ಫಿಫಾ ವಿಶ್ವಕಪ್‌ಗಾಗಿ ರಷ್ಯಾಗೆ ಸೈಕಲ್ ಸವಾರಿ ಮಾಡಿ ದಾಖಲೆ ಬರೆದಿದ್ದಾರೆ.
ತಿರುವನಂತಪುರಂ(ಜೂ.19): ಫುಟ್ಬಾಲ್ ಪಂದ್ಯವನ್ನ ಅತೀ ಹೆಚ್ಚು ಪ್ರೀತಿಸುವ ಭಾರತದ ರಾಜ್ಯಗಳಲ್ಲಿ ಕೇರಳ ಮುಂಚೂಣಿಯಲ್ಲಿದೆ. ಇಲ್ಲಿನ ಪುಟಾಣಿಗಳಿಂದ ಹಿಡಿದು,ಎಲ್ಲಾ ವಯಸ್ಕರಿಗೂ ಫುಟ್ಬಾಲ್ ಅಚ್ಚುಮೆಚ್ಚು. ಇದೀಗ ಕೇರಳ ಫುಟ್ಬಾಲ್ ಅಭಿಮಾನಿಯೊಬ್ಬ ರಷ್ಯಾಗೆ ಸೈಕಲ್‌ನಲ್ಲಿ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ.
ಫಿಫಾ ವಿಶ್ವಕಪ್‌ಗಾಗಿ ರಷ್ಯಾ ತಲುಪಿದ ಈ ಫುಟ್ಬಾಲ್ ಅಭಿಮಾನಿ ಹೆಸರು ಕ್ಲಿಫಿನ್ ಫ್ರಾನ್ಸಿಸ್. 28 ವರ್ಷದ ಕ್ಲಿಫಿನ್ ಫ್ರಾನ್ಸಿಸ್ ಫೆ.23 ರಂದು ಕೇರಳದಿಂದ ದುಬೈಗೆ ತೆರಳಿದರು. ಅಲ್ಲಿ ಹೊಸ ಸೈಕಲ್ ಖರೀದಿಸಿದ ಅವರು, ಹಡಗಿನಲ್ಲಿ ಇರಾನ್‌ನ ಬಂದರ್ ಅಬ್ಬಾಸ್ ಎನ್ನುವ ಸ್ಥಳ ತಲುಪಿದರು. ಮಾ.13 ರಂದು ಇಲ್ಲಿಂದ
ಅವರ ಸೈಕಲ್ ಯಾನ ಆರಂಭವಾಯಿತು. 4 ತಿಂಗಳ ಪ್ರಯಾಣದಲ್ಲಿ ಹಲವು ದೇಶ, ಪ್ರಾಂತ್ಯಗಳನ್ನು ದಾಟಿ ಜೂ.5 ಕ್ಕೆ ರಷ್ಯಾ ಪ್ರವೇಶಿಸಿರುವ ಅವರು, ಜೂ.21ರ ವೇಳೆಗೆ ಮಾಸ್ಕೋ ಸೇರಲಿದ್ದಾರೆ.
ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ಜೂ.26 ರಂದು ನಡೆಯಲಿರುವ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯದ ಟಿಕೆಟ್ ಖರೀದಿಸಿರುವ ಕ್ಲಿಫಿನ್, ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಆದರೆ ಕ್ಲಿಫಿನ್ ಕನಸು ದೊಡ್ಡದಿದೆ. ತಾವು ಆರಾಧಿಸುವ ಅರ್ಜೆಂಟೀನಾದ ಕಾಲ್ಚೆಂಡಿನ ಮಾಂತ್ರಿಕ ಲಿಯೋನೆಲ್ ಮೆಸ್ಸಿಯನ್ನು ಭೇಟಿಯಾಗುವ ಕನಸು ಹೊತ್ತು ರಷ್ಯಾಗೆತೆರಳಿರುವುದಾಗಿ ಕ್ಲಿಫಿನ್ ಹೇಳಿದ್ದಾರೆ.
ಕ್ಲಿಫಿನ್ ಫ್ರಾನ್ಸಿಸ್ ಒಬ್ಬ ಹವ್ಯಾಸಿ ಸೈಕಲ್ ಪಟು. ಕಳೆದ ವರ್ಷ ಕೇರಳದಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದ್ದರು. ಆ ವೇಳೆಯೇ ರಷ್ಯಾಗೆ ಸೈಕಲ್ ನಲ್ಲಿ ಹೋಗುವ ಯೋಜನೆ ರೂಪಿಸಿದೆ. ಅದಕ್ಕೆ ಬೇಕಿರುವ ಸಕಲ ತಯಾರಿ ಮಾಡಿಕೊಂಡೆ ಎಂದು ಕ್ಲಿಫಿನ್ ಹೇಳಿದ್ದಾರೆ.
ಬಿ.ಟೆಕ್ ಪದವೀಧರರಾಗಿರುವ ಫ್ರಾನ್ಸಿಸ್ ಕೊಚ್ಚಿಯಲ್ಲಿ ಕೆಲ ಕಾಲ ಉದ್ಯೋಗದಲ್ಲಿದ್ದರು. ಬಳಿಕ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಸೇರಿಕೊಂಡ ಕ್ಲಿಫಿನ್, ಸಂಪಾದಿಸುವ ಹಣವನ್ನು ಉಳಿತಾಯ ಮಾಡಿ ರಷ್ಯಾ ಪ್ರವಾಸಕ್ಕೆ ಅಣಿಯಾದರು. ಸಂಬಂಧಿಕರು ಸಹ ಅವರ ಪ್ರವಾಸಕ್ಕೆ ಆರ್ಥಿಕ
ನೆರವು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.