ಸೋಚಿ[ಜು.09]: ಶನಿವಾರ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ, ಕ್ರೊವೇಷಿಯಾ ತಂಡಕ್ಕಿಂತ ಆ ದೇಶದ ಅಧ್ಯಕ್ಷೆ ಕೊಲಿಂಡಾ ಗ್ರಾಬರ್ ಕಿಟ್ರೊವಿಚ್ ಹೆಚ್ಚು ಗಮನ ಸೆಳೆದರು.

ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾನ್ಟಿನೋ ಹಾಗೂ ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಜತೆ ವಿಐಪಿ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಕೊಲಿಂಡಾ, ಶೂಟೌಟ್‌ನಲ್ಲಿ ಕ್ರೊವೇಷಿಯಾ ಜಯ ಸಾಧಿಸುತ್ತಿದ್ದಂತೆ ಕುಣಿದಾಡಿ ಸಂಭ್ರಮಿಸಿದರು. ಇದು ರಷ್ಯಾ ಪ್ರಧಾನಿಯನ್ನು ಮುಜುಗರಕ್ಕೀಡು ಮಾಡಿತು. ಬಳಿಕ ಕ್ರೊವೇಷಿಯಾ ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಕುಣಿದು ಕುಪ್ಪಳಿಸಿದ ಅಧ್ಯಕ್ಷೆ ಕೊಲಿಂಡಾ, ಆಟಗಾರರ ಸಂಭ್ರಮದಲ್ಲಿ ಭಾಗಿಯಾದರು. 

ಸಂಭ್ರಮಾಚರಣೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ತಂಡದ ಕ್ವಾರ್ಟರ್ ಫೈನಲ್ ಪಂದ್ಯ ವೀಕ್ಷಿಸಲು ಕ್ರೊವೇಷಿಯಾದಿಂದ ರಷ್ಯಾಗೆ ಆಗಮಿಸಿದ ಕೊಲಿಂಡಾ, ವಿಮಾನದಲ್ಲಿ ಅಭಿಮಾನಿಗಳೊಂದಿಗೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದರು. ಪಂದ್ಯ ವೀಕ್ಷಿಸಲು ಆಗಮಿಸಿದ ಅಭಿಮಾನಿಗಳೊಂದಿಗೆ ವಿಮಾನದಲ್ಲಿ ಫೋಟೋ ತೆಗಿಸಿಕೊಂಡು ಎಲ್ಲರ ಮನ ಗೆದ್ದರು. ಈ ಫೋಟೋಗಳು ಸಹ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.