30ನೇ ನಿಮಿಷದಲ್ಲಿ ವೃತ್ತದೊಳಗೆ ಜಿತೇಂದ್ರ ಫೌಲ್ ಎಸೆಗಿದ ಕಾರಣ, ಅಮೆರಿಕಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯುಎಸ್‌ಎ ನಾಯಕ ಜೋಶ್ ಸರ್ಜೆಂಟ್ ತಪ್ಪು ಮಾಡಲಿಲ್ಲ. 43ನೇ ನಿಮಿಷದಲ್ಲಿ ಅನಿಕೇತ್ ಜಾಧವ್ ಗೋಲು ಬಾರಿಸುವ ಪ್ರಯತ್ನ ಫಲ ನೀಡಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ಅಮೆರಿಕ 1-೦ ಮುನ್ನಡೆ ಪಡೆದುಕೊಂಡಿತು.
ನವದೆಹಲಿ(ಅ.06): ಫಿಫಾ ಅಂಡರ್-17 ವಿಶ್ವಕಪ್ ಅಭಿಯಾನವನ್ನು ಭಾರತ ಸೋಲಿನೊಂದಿಗೆ ಆರಂಭಿಸಿದೆ. ಫಿಫಾ ಪಂದ್ಯಾವಳಿಯಲ್ಲಿ ಮೊತ್ತ ಮೊದಲ ಪಂದ್ಯವನ್ನಾಡಿದ ಭಾರತ, ಬಲಿಷ್ಠ ಅಮೆರಿಕ ವಿರುದ್ಧ ೦-3 ಗೋಲುಗಳಿಂದ ವೀರೋಚಿತ ಸೋಲು ಕಂಡಿತು.
ತವರಿನ ಅಭಿಮಾನಿಗಳ ಭಾರೀ ಬೆಂಬಲದೊಂದಿಗೆ ಕಣಕ್ಕಿಳಿದ ಭಾರತ, ಆರಂಭದಿಂದಲೂ ಗಮನ ಸೆಳೆಯಿತು. ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಅಮೆರಿಕವನ್ನು ನಿಯಂತ್ರಿಸುವಲ್ಲಿ ಭಾರತದ ರಕ್ಷಣಾ ಪಡೆ ಸಫಲವಾಯಿತು. ಪ್ರಮುಖವಾಗಿ ಗೋಲ್ ಕೀಪರ್ ಧೀರಜ್ ಸಿಂಗ್ ಆಕರ್ಷಕ ಆಟ ತೋರಿದರು.
ಆಪತ್ತು ತಂದ ಪೆನಾಲ್ಟಿ:
30ನೇ ನಿಮಿಷದಲ್ಲಿ ವೃತ್ತದೊಳಗೆ ಜಿತೇಂದ್ರ ಫೌಲ್ ಎಸೆಗಿದ ಕಾರಣ, ಅಮೆರಿಕಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯುಎಸ್ಎ ನಾಯಕ ಜೋಶ್ ಸರ್ಜೆಂಟ್ ತಪ್ಪು ಮಾಡಲಿಲ್ಲ. 43ನೇ ನಿಮಿಷದಲ್ಲಿ ಅನಿಕೇತ್ ಜಾಧವ್ ಗೋಲು ಬಾರಿಸುವ ಪ್ರಯತ್ನ ಫಲ ನೀಡಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ಅಮೆರಿಕ 1-೦ ಮುನ್ನಡೆ ಪಡೆದುಕೊಂಡಿತು.
ದ್ವಿತೀಯಾರ್ಧದಲ್ಲಿ 2 ಗೋಲು:
2ನೇ ಅವಧಿಯ ಆಟದಲ್ಲಿ ಅಮೆರಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿತು. 47ನೇ ನಿಮಿಷದಲ್ಲಿ ಸರ್ಜೆಂಟ್ 2ನೇ ಗೋಲಿಗೆ ಪ್ರಯತ್ನಿಸಿದರು. 49ನೆ ನಿಮಿಷದಲ್ಲೂ ಯುಎಸ್ಎಗೆ ಗೋಲು ಬಾರಿಸುವ ಯತ್ನ ನಡೆಸಿತು. ಆದರೆ ಗೋಲಿ ಧೀರಜ್ ಅದಕ್ಕೆ ಅವಕಾಶ ನೀಡಲಿಲ್ಲ. 51ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ನಲ್ಲಿ ಡರ್ಕಿನ್ ಯುಎಸ್ಎಗೆ 2ನೇ ಗೋಲು ತಂದಿತ್ತರು. 62ನೇ ನಿಮಿಷದಲ್ಲಿ ಯುಎಸ್ಎ 3ನೇ ಗೋಲಿನ ಅವಕಾಶ ಕೈಚೆಲ್ಲಿತು. 84ನೇ ನಿಮಿಷದಲ್ಲಿ ಕಾರ್ಲ್ಟನ್ ಮುನ್ನಡೆಯನ್ನು 3-0 ಗೇರಿಸಿದರು.
ದ್ವಿತೀಯಾರ್ಧದಲ್ಲಿ ಭಾರತ ಹೆಚ್ಚಿನ ಪೈಪೋಟಿ ನೀಡಿತಾದರೂ ಗೋಲು ಪೆಟ್ಟಿಗೆಗೆ ಒಮ್ಮೆಯೂ ಚೆಂಡನ್ನು ಸೇರಿಸಲು ಸಾಧ್ಯವಾಗಲಿಲ್ಲ. ವಿಶ್ವದ ಪ್ರತಿಷ್ಠಿತ ಕ್ಲಬ್ಗಳ ಪರ ಆಡುವ ಅನೇಕ ಆಟಗಾರರನ್ನು ಒಳಗೊಂಡಿದ್ದ ಅಮೆರಿಕ ವಿರುದ್ಧ ಫುಟ್ಬಾಲ್ ಶಿಶು ಭಾರತ ತೋರಿದ ಹೋರಾಟ ನೆರೆದಿದ್ದ ಸಾವಿರಾರು ಅಭಿಮಾನಿಗಳ ಮನ ಸೆಳೆಯಿತು
