ತನ್ನ ಅಧೀನದ ಸಂಸ್ಥೆಗಳು ಸಂಪೂರ್ಣ ಸ್ವಾಯತ್ತವಾಗಿರಬೇಕು. ಅದರ ಆಡಳಿತದಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪ ಇರಬಾರದು ಎಂಬುದು ಫೀಫಾದ ನಿಯಮಗಳಲ್ಲೊಂದಾಗಿದೆ. ಆದರೆ, ಪಾಕಿಸ್ತಾನದ ಹೈಕೋರ್ಟ್'ವೊಂದು ನೇಮಿಸಿದ ಆಡಳಿತಾಧಿಕಾರಿಯ ನಿಯಂತ್ರಣದಲ್ಲಿ ಸದ್ಯಕ್ಕೆ ಪಿಎಫ್'ಎಫ್ ಇದೆ.
ನವದೆಹಲಿ(ಅ. 11): ಪಾಕಿಸ್ತಾನ ಫುಟ್ಬಾಲ್ ಒಕ್ಕೂಟ(ಪಿಎಫ್'ಎಫ್)ವನ್ನು ಫೀಫಾ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನೀ ಫುಟ್ಬಾಲ್ ಕ್ಷೇತ್ರಕ್ಕೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಾಕಿಸ್ತಾನ್ ಫೂಟ್ಬಾಲ್ ಫೆಡರೇಶನ್'ನ ಆಡಳಿತದಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪವಿರುವುದು ಫೀಫಾದ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ. ತನ್ನ ಅಧೀನದ ಸಂಸ್ಥೆಗಳು ಸಂಪೂರ್ಣ ಸ್ವಾಯತ್ತವಾಗಿರಬೇಕು. ಅದರ ಆಡಳಿತದಲ್ಲಿ ಮೂರನೇ ಪಕ್ಷದ ಹಸ್ತಕ್ಷೇಪ ಇರಬಾರದು ಎಂಬುದು ಫೀಫಾದ ನಿಯಮಗಳಲ್ಲೊಂದಾಗಿದೆ. ಆದರೆ, ಪಾಕಿಸ್ತಾನದ ಹೈಕೋರ್ಟ್'ವೊಂದು ನೇಮಿಸಿದ ಆಡಳಿತಾಧಿಕಾರಿಯ ನಿಯಂತ್ರಣದಲ್ಲಿ ಸದ್ಯಕ್ಕೆ ಪಿಎಫ್'ಎಫ್ ಇದೆ.
ಕೋರ್ಟ್ ಅಂಕೆ ಯಾಕೆ?
2015ರಲ್ಲಿ ಪಾಕಿಸ್ತಾನ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಚುನಾವಣೆಯಲ್ಲಿ ಫೈಸಲ್ ಸಲೆಹ್ ಹಯಾತ್ ಅವರು ಜಯಿಸಿದ್ದರು. ಆದರೆ, ಆ ಚುನಾವಣೆಯಲ್ಲಿ ಭಾರೀ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿತು. ಈ ವಿಚಾರವು ಕೋರ್ಟ್ ಅಂಗಳಕ್ಕೆ ಪ್ರವೇಶಿಸಿತು. ಸಮಸ್ಯೆ ಬಗೆಹರಿಸಲು ಲಾಹೋರ್ ಉಚ್ಚ ನ್ಯಾಯಾಲಯವು ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಿ ಪಿಎಫ್'ಎಫ್'ನ ವ್ಯವಹಾರದ ಜವಾಬ್ದಾರಿ ಕೊಟ್ಟಿತು. ಆಗಿನಿಂದ ಪಿಎಫ್'ಎಫ್'ನ ವ್ಯವಹಾರಗಳೆಲ್ಲವೂ ಕೋರ್ಟ್ ನೇಮಿತ ವ್ಯಕ್ತಿಯಿಂದಲೇ ನಡೆಯುತ್ತಿವೆ.
ನಿಷೇಧ ವಾಪಸ್ ಯಾವಾಗ?
ಕೋರ್ಟ್ ನೇಮಿತ ಆಡಳಿತಾಧಿಕಾರಿಯಿಂದ ಪಾಕಿಸ್ತಾನ ಫುಟ್ಬಾಲ್ ಒಕ್ಕೂಟದ ನಿಯಂತ್ರಣವು ಸಂಸ್ಥೆಗೇ ವಾಪಸ್ ಬರಬೇಕು. ಹಾಗೂ ಪಿಎಫ್'ಎಫ್'ನ ಎಲ್ಲಾ ವ್ಯವಹಾರಗಳು, ದಾಖಲೆಗಳು ವಾಪಸ್ ಬರಬೇಕು. ಪಿಎಫ್'ಎಫ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಹೀಗಾದಾಗ ಮಾತ್ರ ಫೀಫಾ ತನ್ನ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪಾಕಿಸ್ತಾನವು ಯಾವುದೇ ಅಂತಾರಾಷ್ಟ್ರೀಯ ಫುಟ್ಬಾಲ್ ಆಡುವಂತಿಲ್ಲ. ಫೀಫಾ ಅಥವಾ ಎಎಫ್'ಸಿಯಿಂದ ಯಾವುದೇ ದೇಣಿಗೆಯಾಗಲೀ ತರಬೇತಿಯಾಗಲೀ ಸಿಗುವುದಿಲ್ಲ. ಇದೇ ವೇಳೆ, ಫೈಸಲ್ ಸಲೆಹ್ ಹಯಾತ್ ಅವರು ಲಾಹೋರ್ ಹೈಕೋರ್ಟ್'ಗೆ ಹೋಗಿ ತಮಗೆ ಅಧಿಕಾರವನ್ನು ಮರಳಿಸಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ.
2015ರಿಂದಲೂ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನೇ ಆಡದ ಪಾಕಿಸ್ತಾನವು ಸದ್ಯಕ್ಕೆ ರ್ಯಾಂಕಿಂಗ್'ನಲ್ಲಿ 200ನೇ ಸ್ಥಾನಕ್ಕೆ ಕುಸಿದಿದೆ. ಭಾರತದಲ್ಲಿ ಐಲೀಗ್ ಮತ್ತು ಐಎಸ್'ಎಲ್ ಎಂಬ ಎರಡು ಟಾಪ್ ಫುಟ್ಬಾಲ್ ಲೀಗ್'ಗಳಿವೆ. ಆದರೆ, ಪಾಕಿಸ್ತಾನದಲ್ಲಿ ಅಂತಹ ಒಂದೂ ಕೂಡ ಪ್ರೊಫೆಷನಲ್ ಲೀಗ್ ಇಲ್ಲ. ದಿನೇ ದಿನೇ ಸಮಸ್ಯೆಗಳ ಸರಮಾಲೆಯನ್ನೇ ಕಾಣುತ್ತಿರುವ ಪಾಕಿಸ್ತಾನದ ಸಂಕಷ್ಟ ಇನ್ನೆಷ್ಟು ವರ್ಷಗಳವರೆಗೆ ಮುಂದುವರಿಯುತ್ತದೋ ಎಂದು ಅಲ್ಲಿಯ ಫುಟ್ಬಾಲ್ ಆಸಕ್ತರು ಚಿಂತಿತರಾಗಿದ್ದಾರೆ. ಇತ್ತ, ಭಾರತವು ಅಂಡರ್-17 ಫೀಫಾ ವಿಶ್ವಕಪ್ ಆತಿಥ್ಯ ವಹಿಸಿ ವಿಶ್ವದ ಗಮನ ಸೆಳೆಯುತ್ತಿದ್ದರೆ, ಅತ್ತ ಪಾಕಿಸ್ತಾನವು ವಿಶ್ವ ಫುಟ್ಬಾಲ್ ಭೂಪಟದಿಂದ ನಿಧಾನವಾಗಿ ಕಣ್ಮರೆಯಾಗುತ್ತಿದೆ.
