ಸೇಂಟ್’ಪೀಟರ್ಸ್’ಬರ್ಗ್[ಜು.11]: ಸ್ಯಾಮುಯಲ್ ಉಮ್ಟಿಟಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ 2018ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಫೈನಲ್‌ಗೆ ಫ್ರಾನ್ಸ್ ಲಗ್ಗೆಯಿಟ್ಟಿದೆ. ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಲೆಸ್ ಬ್ಲೂಸ್ ಎಂದೇ ಖ್ಯಾತಿ ಪಡೆದಿರುವ ಫ್ರಾನ್ಸ್ 1-0 ಗೋಲಿನಿಂದ ಗೆಲುವು ಸಾಧಿಸಿತು. 1998ರ ಚಾಂಪಿಯನ್, 2006ರ ರನ್ನರ್-ಅಪ್ ಫ್ರಾನ್ಸ್ 12 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿದ್ದು, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್ ಇಲ್ಲವೇ
ಕ್ರೊವೇಷಿಯಾವನ್ನು ಎದುರಿಸಲಿದೆ.
ಚೊಚ್ಚಲ ಬಾರಿಗೆ ಫೈನಲ್‌ಗೇರುವ ವಿಶ್ವ ನಂ.3 ಬೆಲ್ಜಿಯಂ ಕನಸು ಕನಸಾಗಿಯೇ ಉಳಿದಿದೆ. ತಂಡ 2ನೇ ಸೆಮಿಫೈನಲ್‌ನಲ್ಲಿ ಸೋಲುವ ತಂಡದ ವಿರುದ್ಧ ಶನಿವಾರ (ಜು.14) 3ನೇ ಸ್ಥಾನಕ್ಕಾಗಿ ಸೆಣಸಲಿದೆ. ಪಂದ್ಯದ ಮೊದಲಾರ್ಧದಲ್ಲೇ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. 18ನೇ ನಿಮಿಷದಲ್ಲಿ ಫ್ರಾನ್ಸ್ ಬ್ಲಾಸಿ ಮಟ್ಯುಡಿ ಗೋಲಿನ ಅವಕಾಶ ಸೃಷ್ಟಿಸಿದ್ದರು. ಆದರೆ ಯಶಸ್ಸು ಸಿಗಲಿಲ್ಲ. ಬೆಲ್ಜಿಯಂ ಸಹ ಗೋಲು ಗಳಿಸುವ ಸನಿಹಕ್ಕೆ ತಲುಪಿತ್ತಾದರೂ, ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾದವು. 
ಮೊದಲಾರ್ಧದಲ್ಲಿ ಸಮಬಲ ಸಾಧಿಸಿದ ಬಳಿಕ ಕಳೆದ 22 ವಿಶ್ವಕಪ್ ಪಂದ್ಯಗಳಲ್ಲಿ ಫ್ರಾನ್ಸ್ ಸೋಲುಂಡಿದ್ದಿದ್ದು ಕೇವಲ ಒಮ್ಮೆ ಮಾತ್ರ. ಆದರೆ ಮೊದಲಾರ್ಧದಲ್ಲಿ ಸಮಬಲ ಸಾಧಿಸಿದ ಬಳಿಕ ಬೆಲ್ಜಿಯಂ ತನ್ನ ಕೊನೆಯ 6 ಪಂದ್ಯಗಳಲ್ಲಿ ಜಯಿಸಿತ್ತು. ಈ ಅಂಕಿ-ಅಂಶಗಳು ದ್ವಿತೀಯಾರ್ಧವನ್ನು ಮತ್ತಷ್ಟು ರೋಚಕಗೊಳಿಸಿದವು.
ದ್ವಿತೀಯಾರ್ಧ ಆರಂಭಗೊಂಡು ಕೇವಲ 6 ನಿಮಿಷದಲ್ಲಿ, ಎಂದರೆ 51ನೇ ನಿಮಿಷದಲ್ಲಿ ಫ್ರಾನ್ಸ್ ಗೋಲಿನ ಖಾತೆ ತೆರೆಯಿತು. ಕಾರ್ನರ್ ಕಿಕ್ ಅವಕಾಶದಲ್ಲಿ ಆ್ಯಂಟೋನಿ ಗ್ರೀಜ್‌ಮನ್ ಒದ್ದ ಚೆಂಡನ್ನು, ಬೆಲ್ಜಿಯಂನ ಬಲಿಷ್ಠ ಡಿಫೆಂಡರ್‌ಗಳನ್ನು ವಂಚಿಸಿ ಆಕರ್ಷಕ ಹೆಡ್ಡರ್ ಮೂಲಕ ಸ್ಯಾಮುಯಲ್ ಉಮ್ಟಿಟಿ ಗೋಲು ಪೆಟ್ಟಿಗೆಗೆ ಸೇರಿಸಿದರು. 1-0 ಮುನ್ನಡೆ ಪಡೆದ ಫ್ರಾನ್ಸ್, ಈ ಅಂತರವನ್ನು ಕಾಯ್ದುಕೊಳ್ಳುವತ್ತ ಹೆಚ್ಚು ಗಮನ ಹರಿಸಿತು. ಬೆಲ್ಜಿಯಂ ಎಷ್ಟೇ ಹೋರಾಡಿದರೂ, ಗೋಲು ಗಳಿಸಲು ಮಾತ್ರ ಸಾಧ್ಯವಾಗಲಿಲ್ಲ. ನಾಯಕ ಏಡನ್ ಹಜಾರ್ಡ್, ಡಿಫೆಂಡರ್ ಟೋಬಿ ಆಲ್ಡರ್‌ವಿರೆಲ್ಡ್ ಹಳದಿ ಕಾರ್ಡ್ ಪಡೆದಿದ್ದು ತಂಡ ತನ್ನ ಆಕ್ರಮಣಕಾರಿ ಆಟವನ್ನು ಕೊಂಚ ತಗ್ಗಿಸಲು ಕಾರಣವಾಯಿತು. ಇದರ ಲಾಭ ಪಡೆದ ಫ್ರಾನ್ಸ್, ಪಂದ್ಯವನ್ನು ನಿಯಂತ್ರಣಕ್ಕೆ ಪಡೆದುಕೊಂಡಿತು.
ನಿಗದಿತ 90 ನಿಮಿಷಗಳ ಮುಕ್ತಾಯದ ಬಳಿಕ 7 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಈ ಅವಧಿಯಲ್ಲಿ ಬೆಲ್ಜಿಯಂ ಗೋಲು ಗಳಿಸಲು ಶತಪ್ರಯತ್ನ ನಡೆಸಿತು. ಕೆಲ ಆಟಗಾರರನ್ನು
ಬದಲಿಸಲಾಯಿತು ಸಹ. ಆದರೂ, ಗೋಲ್ ಕೀಪರ್ ಲಾರಿಸ್ ಮುಂದಾಳತ್ವದ ಫ್ರಾನ್ಸ್ ರಕ್ಷಣಾ ಪಡೆಯನ್ನು ದಾಟಿ ಗೋಲು ಗಳಿಸಲು ಬೆಲ್ಜಿಯಂಗೆ ಸಾಧ್ಯವಾಗಲೇ ಇಲ್ಲ.