Asianet Suvarna News Asianet Suvarna News

Chess World Cup 2023: ಆರ್‌.ಪ್ರಜ್ಞಾನಂದ & ಅರ್ಜುನ್‌ ಎರಿಗೈಸಿ ಇಬ್ಬರಲ್ಲಿ ಐತಿಹಾಸಿಕ ಸೆಮೀಸ್‌ ಭಾಗ್ಯ ಯಾರಿಗೆ?

ಎರಡನೇ ಕ್ವಾರ್ಟರ್‌ನಲ್ಲಿ ಆರ್‌.ಪ್ರಜ್ಞಾನಂದ ಹಾಗೂ ಅರ್ಜುನ್‌ ಎರಿಗೈಸಿ ಸ್ಪರ್ಧಿಸುತ್ತಿದ್ದು, ಪಂದ್ಯ 1-1 ಸಮಬಲಗೊಂಡ ಕಾರಣ ಗುರುವಾರ ಟೈ ಬ್ರೇಕರ್‌ ನಡೆಯಲಿದೆ. ಈ ಮೂಲಕ ಇಬ್ಬರಲ್ಲಿ ಒಬ್ಬರು 2 ದಶಕಗಳ ಬಳಿಕ ಭಾರತದಿಂದ ಸೆಮೀಸ್‌ಗೇರಿದ ಸಾಧನೆ ಮಾಡಲಿದ್ದಾರೆ.

FIDE World Cup chess Gukesh Gujrathi bow out Praggnanandhaa forces tie breaker against Erigaisi kvn
Author
First Published Aug 17, 2023, 9:54 AM IST

ಬಾಕು(ಅಜರ್‌ಬೈಜಾನ್): 2023ರ ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಭಾರತೀಯ ಯಾರು ಎಂಬ ಕುತೂಹಲ ಹಾಗೇ ಉಳಿದುಕೊಂಡಿದೆ. ಈಗಾಗಲೇ ನಾಲ್ವರು ಭಾರತೀಯರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದು, ಈ ಪೈಕಿ ಇಬ್ಬರು ಸೋತು ಹೊರಬಿದ್ದಿದ್ದಾರೆ. ಇನ್ನಿಬ್ಬರ ನಡುವಿನ ರೋಚಕ ಕ್ವಾರ್ಟರ್‌ ಹಣಾಹಣಿ ಗುರುವಾರವೂ ಮುಂದುವರಿಯಲಿದ್ದು, ಸೆಮೀಸ್‌ ಭಾಗ್ಯ ಯಾರಿಗೆ ಸಿಗಲಿದೆ ಎಂಬ ಉತ್ತರ ದೊರಕಲಿದೆ.

17 ವರ್ಷದ ಡಿ.ಗುಕೇಶ್‌, 5 ಬಾರಿ ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಹಾಗೂ ವಿದಿತ್‌ ಗುಜರಾತಿ ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಬುಧವಾರ ಕ್ವಾರ್ಟರ್‌ನಲ್ಲಿ ಪರಾಭವಗೊಂಡರು. ಮತ್ತೊಂದು ಕ್ವಾರ್ಟರ್‌ನಲ್ಲಿ ಆರ್‌.ಪ್ರಜ್ಞಾನಂದ ಹಾಗೂ ಅರ್ಜುನ್‌ ಎರಿಗೈಸಿ ಸ್ಪರ್ಧಿಸುತ್ತಿದ್ದು, ಪಂದ್ಯ 1-1 ಸಮಬಲಗೊಂಡ ಕಾರಣ ಗುರುವಾರ ಟೈ ಬ್ರೇಕರ್‌ ನಡೆಯಲಿದೆ. ಈ ಮೂಲಕ ಇಬ್ಬರಲ್ಲಿ ಒಬ್ಬರು 2 ದಶಕಗಳ ಬಳಿಕ ಭಾರತದಿಂದ ಸೆಮೀಸ್‌ಗೇರಿದ ಸಾಧನೆ ಮಾಡಲಿದ್ದಾರೆ.

Chess World Cup 2023: ಭಾರತದ ನಾಲ್ವರು ಕ್ವಾರ್ಟರ್‌ಗೆ ಲಗ್ಗೆ

ನಡೆಯದ ಮ್ಯಾಜಿಕ್‌: ಗುಕೇಶ್‌ ಮಂಗಳವಾರ ಮೊದಲ ಸುತ್ತಿನಲ್ಲಿ ಕಾರ್ಲ್‌ಸನ್‌ ವಿರುದ್ಧ ಸೋತಿದ್ದರು. ಸೆಮೀಸ್‌ಗೇರಬೇಕಿದ್ದರೆ ಬುಧವಾರ ಗುಕೇಶ್‌ ಗೆಲ್ಲಲೇಬೇಕಿತ್ತು. ಆದರೆ ಕಾರ್ಲ್‌ಸನ್‌ ಮೇಲೆ ತೀವ್ರ ಒತ್ತಡ ಹೇರಿದ ಹೊರತಾಗಿಯೂ ಡ್ರಾಗೆ ತೃಪ್ತಿಪಟ್ಟುಕೊಂಡರು. ಮತ್ತೊಂದು ಪಂದ್ಯದಲ್ಲಿ ಮಂಗಳವಾರ ಮೊದಲ ಸುತ್ತಿನಲ್ಲಿ ನಿಜಾತ್‌ ವಿರುದ್ಧ ಡ್ರಾ ಸಾಧಿಸಿದ್ದ ವಿದಿತ್‌ಗೆ 2ನೇ ಸುತ್ತಿನಲ್ಲಿ ಸೋಲು ಎದುರಾಯಿತು. ಸೆಮೀಸ್‌ನಲ್ಲಿ ಕಾರ್ಲ್‌ಸನ್‌ ಹಾಗೂ ನಿಜಾತ್‌ ಮುಖಾಮುಖಿಯಾಗಲಿದ್ದಾರೆ.

ಯಾಕೆ ಟೈ ಬ್ರೇಕರ್‌?

ಮಂಗಳವಾರ ಪ್ರಜ್ಞಾನಂದ ವಿರುದ್ಧದ ಮೊದಲ ಸುತ್ತಿನಲ್ಲಿ ಅರ್ಜುನ್‌ ಗೆಲುವು ಸಾಧಿಸಿದ್ದರು. ಆದರೆ ಬುಧವಾರ ಅರ್ಜುನ್‌ಗೆ ತಿರುಗೇಟು ನೀಡಿದ ಪ್ರಜ್ಞಾನಂದ 2ನೇ ಸುತ್ತಿನಲ್ಲಿ ಜಯ ತಮ್ಮದಾಗಿಸಿಕೊಂಡರು. ಸದ್ಯ ಇಬ್ಬರೂ ಅಂಕದಲ್ಲಿ ಸಮಬಲಗೊಂಡಿದ್ದು, ಹೀಗಾಗಿ ಫಲಿತಾಂಶ ನಿರ್ಧರಿಸಲು ಟೈ ಬ್ರೇಕರ್‌ ನಡೆಯಲಿದೆ.

ಭಾರತದ 84,330 ಕೋಟಿ ಆಸ್ತಿ ಒಡತಿಯ ಕಂಪೆನಿ ಜತೆ ಕ್ರಿಕೆಟ್ ಆಸ್ಟ್ರೇಲಿಯಾ ಟೈಯಪ್..!

2 ದಶಕಗಳ ಕಾಯುವಿಕೆ!

ಚೆಸ್‌ ವಿಶ್ವಕಪ್‌ನಲ್ಲಿ ಭಾರತದಿಂದ 2002ರಿಂದ ಯಾರು ಕೂಡಾ ಸೆಮಿಫೈನಲ್‌ ಪ್ರವೇಶಿಸಿಲ್ಲ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಪ್ರಶಸ್ತಿ ಗೆದ್ದಿದ್ದರು. ಆದರೆ ಈ ಬಳಿಕ ಈವರೆಗೆ ಯಾರು ಕೂಡಾ ಅಂತಿಮ 4ರ ಘಟ್ಟ ಪ್ರವೇಶಿಸಿಲ್ಲ. ಈ ಬಾರಿ 2 ದಶಕಗಳ ಕಾಯುವಿಕೆಗೆ ಬ್ರೇಕ್‌ ಬೀಳಲಿದ್ದು, ಪ್ರಜ್ಞಾನಂದ ಅಥವಾ ಅರ್ಜುನ್‌ ಸೆಮೀಸ್‌ಗೇರಲಿದ್ದಾರೆ.

ಈಜು ಕೂಟ: ಕರ್ನಾಟಕದ ಇಬ್ಬರು ರಾಷ್ಟ್ರೀಯ ದಾಖಲೆ

ಭುವನೇಶ್ವರ: ಇಲ್ಲಿ ಆರಂಭಗೊಂಡ 39ನೇ ಸಬ್‌ಜೈನಿಯರ್‌, 49ನೇ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮೊದಲ ದಿನವೇ ಪ್ರಾಬಲ್ಯ ಸಾಧಿಸಿದ್ದು, ತನಿಶಿ ಗುಪ್ತಾ ಹಾಗೂ ವಿದಿತ್‌ ಶಂಕರ್‌ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ತನಿಶಿ ಬಾಲಕಿಯರ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ 2 ನಿ. 24.83 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ರಾಜ್ಯದ ನೈಶಾ ಬೆಳ್ಳಿ ಪಡೆದರು. ಇನ್ನು ಬಾಲಕರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಶಂಕರ್‌ 29.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಾಖಲೆಯೊಂದಿಗೆ ಚಿನ್ನ ಗೆದ್ದರು. ಬಾಲಕರ 100 ಮೀ. ಬಟರ್‌ಫ್ಲೈನಲ್ಲಿ ರಾಜ್ಯದ ಕಾರ್ತಿಕೇಯನ್‌ ನಾಯರ್‌ ಬೆಳ್ಳಿ, 400 ಮೀ. ಫ್ರೀಸ್ಟೈಲ್‌ನಲ್ಲಿ ಪೃಥ್ವಿರಾಜ್‌ ಮೆನನ್‌ ಬೆಳ್ಳಿ, ಅಕ್ಷಯ್‌ ಬೆಳ್ಳಿ, 100 ಮೀ. ಬಟರ್‌ಫ್ಲೈ ಗುಂಪು 2ರಲ್ಲಿ ಇಶಾನ್‌ ಮೆಹ್ರಾ ಚಿನ್ನ, ಹರಿಜಾರ್ತಿಕ್‌ ಬೆಳ್ಳಿ, 200 ಮೀ. ಫ್ರಿಸ್ಟೈಲ್‌ನಲ್ಲಿ ಜಾಸ್‌ ಸಿಂಗ್‌ ಚಿನ್ನ ಗೆದ್ದರು. ಬಾಲಕಿಯರ 200 ಮೀ. ವೈಯಕ್ತಿಕ ಮೆಡ್ಲೆನಲ್ಲಿ ಮಾನವಿ ವರ್ಮಾ ಚಿನ್ನ, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರ ಚಿನ್ನ, ಶಾಲಿನಿ ಬೆಳ್ಳಿ, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ನೈಶಾ ಚಿನ್ನ, ತನಿಶಿ ಬೆಳ್ಳಿ ಪಡೆದರು.

Follow Us:
Download App:
  • android
  • ios