ಫಿಡೆ ಮಹಿಳಾ ವಿಶ್ವಕಪ್‌ನಲ್ಲಿ ಕೊನೆರು ಹಂಪಿ ಫೈನಲ್‌ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ದಿವ್ಯಾ ದೇಶ್‌ಮುಖ್‌ ವಿರುದ್ಧ ಮುಖಾಮುಖಿಯಾಗಲಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಇಬ್ಬರು ಭಾರತೀಯರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಬಟುಮಿ(ಜಾರ್ಜಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಈ ಬಾರಿ ಇಬ್ಬರು ಭಾರತೀಯರು ಮುಖಾಮುಖಿಯಾಗಲಿದ್ದಾರೆ.

ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವಿನ ಸೆಮಿಫೈನಲ್‌ನ 2 ಗೇಮ್‌ ಕೂಡಾ ಡ್ರಾಗೊಂಡಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಗುರುವಾರ ಟೈ ಬ್ರೇಕರ್‌ ನಡೆಸಲಾಯಿತು. ಟೈ ಬ್ರೇಕರ್‌ನ ತಲಾ 15 ನಿಮಿಷಗಳ ಪಂದ್ಯದಲ್ಲಿ 1-1 ಡ್ರಾ ಆಯಿತು. ಬಳಿಕ 10 ನಿಮಿಷಗಳ ಪಂದ್ಯವೂ ಸಮಬಲಗೊಂಡಿತು. ನಂತರ ನಡೆದ ಮತ್ತೊಂದು ಸುತ್ತಿನ ಟೈ ಬ್ರೇಕರ್‌ನಲ್ಲಿ ಗೆದ್ದು ಕೊನೆರು ಫೈನಲ್‌ಗೇರಿದರು. ಇದರೊಂದಿಗೆ 2026ರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Scroll to load tweet…

ಫೈನಲ್‌ನಲ್ಲಿ ಕೊನೆರು ಹಂಪಿ vs ದಿವ್ಯಾ ಫೈಟ್‌

ಜು.26, 27ರಂದು ನಡೆಯಲಿರುವ ಟೂರ್ನಿಯ ಫೈನಲ್‌ನಲ್ಲಿ ಕೊನೆರು ಹಂಪಿಗೆ ಅಂತಾರಾಷ್ಟ್ರೀಯ ಮಾಸ್ಟರ್‌ ದಿವ್ಯಾ ದೇಶ್‌ಮುಖ್‌ ಸವಾಲು ಎದುರಾಗಲಿದೆ. ಪಂದ್ಯ ಡ್ರಾ ಆದರೆ ಜು.28ರಂದು ಟೈ ಬ್ರೇಕರ್‌ ನಡೆಯಲಿದೆ. ಭಾರತದ 19 ವರ್ಷದ ದಿವ್ಯಾ ಗುರುವಾರ ಸೆಮಿಫೈನಲ್‌ನಲ್ಲಿ ಚೀನಾದ ಝಾಂಗ್‌ಯೀ ಟಾನ್‌ ವಿರುದ್ಧ ಗೆದ್ದಿದ್ದರು. ಈ ಮೂಲಕ ಮಹಿಳಾ ಚೆಸ್‌ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

Scroll to load tweet…

ಪಿ.ವಿ. ಸಿಂಧುಗೆ ಸೋಲುಣಿಸಿದ 17 ವರ್ಷದ ಉನ್ನತಿ ಹೂಡಾ!

ಚೆಂಗ್ಝೌ: ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಯುವ ಶಟ್ಲರ್‌ ಉನ್ನತಿ ಹೂಡಾ ತಮ್ಮದೇ ದೇಶದ ಹಿರಿಯ ಆಟಗಾರ್ತಿ, 2 ಬಾರಿ ಒಲಿಂಪಿಕ್ ಪದಕ ವಿಜೇತ ಪಿ.ವಿ.ಸಿಂಧುಗೆ ಆಘಾತಕಾರಿ ಸೋಲುಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ 17 ವರ್ಷದ ಉನ್ನತಿ, ವಿಶ್ವ ನಂ.15 ಸಿಂಧು ವಿರುದ್ಧ 21-16, 19-21, 21-13 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಸೂಪರ್‌ 1000 ಟೂರ್ನಿಯಲ್ಲಿ ಮೊದಲ ಬಾರಿ ಅಂತಿಮ 8ರ ಘಟ್ಟ ಪ್ರವೇಶಿಸಿದ್ದಾರೆ. ಇದು ಇವರಿಬ್ಬರ ನಡುವಿನ 2ನೇ ಮುಖಾಮುಖಿಯಾಗಿತ್ತು. ಕಳೆದ ವರ್ಷ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಗೆದ್ದಿದ್ದರು. 2022ರಲ್ಲಿ ಒಡಿಶಾ ಮಾಸ್ಟರ್ಸ್‌, 2023ರ ಅಬುಧಾಬಿ ಮಾಸ್ಟರ್ಸ್‌ ಗೆದ್ದಿರುವ ಹರ್ಯಾಣದ ಉನ್ನತಿ ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ.

ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಗೆ ಲಗ್ಗೆ

ಪುರುಷರ ಡಬಲ್ಸ್‌ನಲ್ಲಿ ಭಾರತದ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಕ್ವಾರ್ಟರ್‌ ಫೈನಲ್‌ಗೇರಿತು. 2ನೇ ಸುತ್ತಿನಲ್ಲಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೊ-ಬಗಾಸ್ ಮೌಲಾನ ವಿರುದ್ಧ 21-19, 21-19ರಲ್ಲಿ ಗೆಲುವು ಲಭಿಸಿತು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಅವರು ಚೈನೀಸ್‌ ತೈಪೆಯ ಚೊಯು ಟೀನ್‌ ಚೆನ್‌ ವಿರುದ್ಧ 21-18, 15-21, 8-21ರಲ್ಲಿ ಸೋತು ಹೊರಬಿದ್ದರು.

ಈ ಬಾರಿಯೂ ಐಎಸ್‌ಎಲ್‌ ನಡೆಯುತ್ತೆ: ಭಾರತೀಯ ಫುಟ್ಬಾಲ್‌ ಅಧ್ಯಕ್ಷ ಕಲ್ಯಾಣ್‌

ನವದೆಹಲಿ: ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಇಂಡಿಯನ್ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಈ ಬಾರಿ ನಡೆಯಲಿದೆ ಎಂದು ಭಾರತೀಯ ಫುಟ್ಬಾಲ್‌ ಫೆಡರೇಷನ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ಭರವಸೆ ನೀಡಿದ್ದಾರೆ. ಒಪ್ಪಂದ ನವೀಕರಣವಾಗದ ಹಿನ್ನೆಲೆಯಲ್ಲಿ ಈ ಬಾರಿ ಲೀಗ್‌ಅನ್ನು ಸ್ಥಗಿತಗೊಳಿಸಿದ್ದಾಗಿ ಆಯೋಜಕರಾದ ಎಫ್‌ಎಸ್‌ಡಿಎಲ್‌ ತಿಳಿಸಿತ್ತು. 

ಈ ಬಗ್ಗೆ ಮಾತನಾಡಿದ ಕಲ್ಯಾಣ್‌, ‘ಎಐಎಫ್‌ಎಫ್‌ ಅಧ್ಯಕ್ಷರಾಗಿ ಈ ಆವೃತ್ತಿಯಲ್ಲೂ ಟೂರ್ನಿ ನಡೆಯುವ ಬಗ್ಗೆ ಭರವಸೆ ನೀಡುತ್ತೇನೆ. ಟೂರ್ನಿ ನಡೆಯದಿದ್ದರೆ ಭಾರತೀಯ ಫುಟ್ಬಾಲ್‌ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದಾರೆ. ಅಲ್ಲದೆ, 10 ದಿನಗಳಲ್ಲಿ ರಾಷ್ಟ್ರೀಯ ಕೋಚ್ ನೇಮಕವಾಗಲಿದೆ ಎಂದಿದ್ದಾರೆ.