ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಕೊನೆರು ಹಂಪಿ ಮತ್ತು ದಿವ್ಯಾ ದೇಶ್‌ಮುಖ್‌ ಮುಖಾಮುಖಿಯಾಗಲಿದ್ದಾರೆ. ಯಾರೇ ಗೆದ್ದರೂ ಭಾರತಕ್ಕೆ ಪ್ರಶಸ್ತಿ ಖಚಿತ. ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಇಬ್ಬರೂ ಅರ್ಹತೆ ಪಡೆದಿದ್ದಾರೆ.

ಬಟುಮಿ(ಜಾರ್ಜಿಯಾ): ಚೆಸ್‌ನಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಬಾರಿಯ ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸೆಣಸಾಡಲಿದ್ದಾರೆ. ಹಿರಿಯ ಚೆಸ್‌ ಪಟು ಕೊನೆರು ಹಂಪಿ ಹಾಗೂ ಯುವ ತಾರೆ ದಿವ್ಯಾ ದೇಶ್‌ಮುಖ್‌ ನಡುವಿನ ಫೈನಲ್‌ ಶನಿವಾರ, ಭಾನುವಾರ ನಡೆಯಲಿದೆ.

ಇದು 3ನೇ ಆವೃತ್ತಿಯ ಮಹಿಳಾ ವಿಶ್ವಕಪ್ ಆಗಿದ್ದು, ಇದೇ ಮೊದಲ ಬಾರಿ ಭಾರತೀಯರು ಫೈನಲ್‌ಗೇರಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಕಿರೀಟ ಭಾರತದ ಪಾಲಾಗಲಿದೆ. ಈಗಾಗಲೇ ಇಬ್ಬರೂ ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ 38 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಇತ್ತೀಚೆಗಷ್ಟೇ ಮಹಿಳಾ ರ್‍ಯಾಪಿಡ್‌ ವಿಶ್ವ ಚಾಂಪಿಯನ್‌ಶಿಪ್‌ ಆಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ಸೆಮಿಫೈನಲ್‌ನಲ್ಲಿ ಚೀನಾದ ಲೀ ಟಿಂಗ್‌ಜೀ ವಿರುದ್ಧ ಟೈ ಬ್ರೇಕರ್‌ನಲ್ಲಿ ಗೆದ್ದಿದ್ದರು.

ಮತ್ತೊಂದೆಡೆ 19 ವರ್ಷದ ನಾಗ್ಪುರದ ದಿವ್ಯಾ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ. 2ನೇ ಶ್ರೇಯಾಂಕಿತ ಚೀನಾದ ಜಿನೆರ್‌ ಝು, ಭಾರತದ ಡಿ.ಹರಿಕಾರನ್ನು ಸೋಲಿಸಿದ್ದ ದಿವ್ಯಾ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಟಾನ್‌ ಝೊಂಗ್ಯಿ ವಿರುದ್ಧ ಜಯಿಸಿದ್ದರು.

ಯಾರಿವರು ಕೊನೆರು?

15 ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌. ಈ ಪಟ್ಟಕ್ಕೇರಿದ ಭಾರತದ ಮೊದಲ ಮಹಿಳೆ.

2 ಬಾರಿ ರ್‍ಯಾಪಿಡ್‌ ವಿಶ್ವ ವಿಶ್ವ ಚಾಂಪಿಯನ್‌(2019, 2024)

ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ. ಭಾರತದ ನಂ.1

ದಿವ್ಯಾ ಸಾಧನೆಯೇನು?

ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ಗೇರಿದ ಅತಿ ಕಿರಿಯೆ.

2024ರಲ್ಲಿ ಫಿಡೆ ಅಂಡರ್‌-20 ವಿಶ್ವ ಚಾಂಪಿಯನ್‌.

ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನ. ಭಾರತದ ನಂ.4

ಹೇಗೆ ನಡೆಯುತ್ತೆ ಫೈನಲ್‌ ಪಂದ್ಯ?

ಫೈನಲ್‌ನಲ್ಲಿ 2 ಕ್ಲಾಸಿಕಲ್‌ ಗೇಮ್‌ ಇರಲಿದೆ. ಶನಿವಾರ ಮೊದಲ ಗೇಮ್‌, ಭಾನುವಾರ 2ನೇ ಗೇಮ್‌ ನಡೆಯಲಿದೆ. ಅಂಕಗಳು ಸಮಬಲಗೊಂಡರೆ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ. ಇದರಲ್ಲಿ 2 ಸುತ್ತಿನ, ತಲಾ 10 ನಿಮಿಷಗಳ ರ್‍ಯಾಪಿಡ್‌ ಗೇಮ್‌ ಆಡಿಸಲಾಗುತ್ತದೆ. ಅಲ್ಲೂ ಟೈ ಆದರೆ ತಲಾ 5 ನಿಮಿಷಗಳ ಮತ್ತೆರಡು ಗೇಮ್‌ ನಡೆಸಲಾಗುತ್ತದೆ. ಫಲಿತಾಂಶ ಬರದಿದ್ದರೆ ತಲಾ 3 ನಿಮಿಷಗಳ 2 ಬ್ಲಿಟ್ಜ್‌ ಗೇಮ್‌ ಆಡಿಸಲಾಗುತ್ತದೆ. ಅಗತ್ಯಬಿದ್ದರೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್‌ ಗೇಮ್‌ ನಡೆಸಲಾಗುತ್ತದೆ.

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ಸೆಮೀಸ್‌ಗೆ

ಚೆಂಗ್ಝೌ: ಭಾರತದ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಏಷ್ಯನ್ ಗೇಮ್ಸ್‌ ಚಾಂಪಿಯನ್‌ ಭಾರತೀಯ ಜೋಡಿಯು ಮಲೇಷ್ಯಾದ ಓಂಗ್‌ ಯೆವ್‌ ಸಿನ್‌-ಟಿಯೊ ಯಿ ವಿರುದ್ಧ 21-18, 21-14ರಲ್ಲಿ ಗೆಲುವು ಲಭಿಸಿತು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ 17 ವರ್ಷದ ಉನ್ನತಿ ಹೂಡಾ, ವಿಶ್ವ ನಂ.4 ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 16-21, 12-21ರಲ್ಲಿ ಸೋತು ಹೊರಬಿದ್ದರು.

ಡೇವಿಸ್‌ ಕಪ್‌: ಸುಮಿತ್‌, ಯೂಕಿ ಭಾರತ ತಂಡಕ್ಕೆ

ನವದೆಹಲಿ: ಸೆ.12ರಂದು ಸ್ವಿಜರ್‌ಲೆಂಡ್ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಟೆನಿಸ್‌ನ ವಿಶ್ವ ಗುಂಪು 1ರ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ತಾರಾ ಆಟಗಾರರಾದ ಸುಮಿತ್‌ ನಗಾಲ್‌, ಯೂಕಿ ಭಾಂಬ್ರಿ ತಂಡಕ್ಕೆ ಮರಳಿದ್ದಾರೆ. ನಗಾಲ್‌ 2023ರ ಸೆಪ್ಟೆಂಬರ್‌ನಲ್ಲಿ ಕೊನೆ ಬಾರಿ ಭಾರತ ಪರ ಆಡಿದ್ದರು. ಇನ್ನು, ಸಿಂಗಲ್ಸ್‌ನಲ್ಲಿ ನಗಾಲ್‌ ಜೊತೆ ಕರಣ್‌ ಸಿಂಗ್‌, ಆರ್ಯನ್‌ ಶಾ, ಡಬಲ್ಸ್‌ನಲ್ಲಿ ಯೂಕಿ ಜೊತೆ ಶ್ರೀರಾಮ್‌ ಬಾಲಾಜಿ ಇದ್ದಾರೆ.