ಬೆಂಗಳೂರು(ಡಿ.18): 2018ರಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ರೀಡಾ ಇಲಾಖೆಗೆ ತರಬೇತುದಾರರಾಗಿ ನೇಮಕವಾಗಿದ್ದ ಫೆನ್ಸಿಂಗ್‌ ಕೋಚ್‌ ಎಂ.ಲಕ್ಷ್ಮೀಶ, ಗುರುವಾರ ಬೆಳಗ್ಗೆಯಿಂದಲೇ ಕ್ರೀಡಾ ಇಲಾಖೆ ಕಟ್ಟಡದ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. 

ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಇಲಾಖೆಯ ಈ ಕಟು ನಿರ್ಧಾರದಿಂದ ತರಬೇತುದಾರರ ಕುಟುಂಬ ಬೀದಿಗೆ ಬಿದ್ದಿದೆ ಎಂದು ಕೋಚ್‌ ಲಕ್ಷ್ಮೇಶ ‘ಕನ್ನಡಪ್ರಭ’ ದೊಂದಿಗೆ ಅಳಲು ತೋಡಿಕೊಂಡರು. ಆ ಬಳಿಕ ಸ್ಥಳಕ್ಕಾಗಮಿಸಿದ ಆಯುಕ್ತ ಶ್ರೀನಿವಾಸ್‌, ಸಮಸ್ಯೆ ಬಗೆಹರಿಸಲು 10 ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಕೋಚ್‌ ಎಂ.ಲಕ್ಷ್ಮೀಶ ಸತ್ಯಾಗ್ರಹವನ್ನು ಕೈ ಬಿಟ್ಟಿದ್ದಾರೆ.

2018ರ ಮಾರ್ಚ್‌ನಲ್ಲಿ ಲಕ್ಷ್ಮೇಶರನ್ನು ನೇಮಕಾತಿ ಮಾಡಲಾಗಿತ್ತು. 1 ವರ್ಷದ ಬಳಿಕ 2019ರ ಮಾರ್ಚ್‌ನಲ್ಲಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಆ ನಂತರದ ದಿನಗಳಲ್ಲಿ ಕೆಲಸಕ್ಕಾಗಿ ಎಂ.ಲಕ್ಷ್ಮೀಶ ಎಲ್ಲೆಡೆ ಅಲೆದಿದ್ದಾರೆ. ಆದರೆ ಎಲ್ಲೂ ಕೆಲಸ ಸಿಕ್ಕಿಲ್ಲ. ಇದೀಗ 2020ರಲ್ಲೂ ಕ್ರೀಡಾ ಇಲಾಖೆ ಗುತ್ತಿಗೆ ಆಧಾರದಲ್ಲಿ ಕೋಚ್‌ ನೇಮಕಾತಿಗೆ ಮುಂದಾಗಿದೆ. ಹೀಗೆ ಹೊಸ ಕೋಚ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತ ಈ ಹಿಂದಿನ ಕೋಚ್‌ಗಳನ್ನೇ ಮುಂದುವರಿಸಬೇಕು ಎಂದು ಎಂ.ಲಕ್ಷ್ಮೀಶ ಆಗ್ರಹಿಸಿದರು. ಲಕ್ಷ್ಮೀಶ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ವಿದಾಯದಿಂದ ಯುವರಾಜ್ ಸಿಂಗ್ ವಾಪಸ್, ಕೇರಳ ತಂಡಕ್ಕೆ ಶ್ರೀಶಾಂತ್ ಕಮ್‌ಬ್ಯಾಕ್!

ಈ ಸಂಬಂಧ ಕ್ರೀಡಾ ಸಚಿವ ಸಿ.ಟಿ. ರವಿ ಅವರಿಗೆ ತಿಂಗಳ ಹಿಂದೆಯೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕ್ರೀಡಾ ಇಲಾಖೆ 2019ರ ಅಕ್ಟೋಬರ್‌ನಲ್ಲಿ ಕೂಡಾ ಕೋಚ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಿದೆ. ಆ ಕೋಚ್‌ಗಳನ್ನು 2020ರ ಅಕ್ಟೋಬರ್‌ನಲ್ಲಿ ತೆಗೆದು ಹಾಕಿದೆ. ಇದೀಗ ರಾಜ್ಯದಲ್ಲಿನ ಸುಮಾರು 74 ತರಬೇತುದಾರರು ಬೀದಿಗೆ ಬಂದಿದ್ದಾರೆ ಎಂದು ಎಂ.ಲಕ್ಷ್ಮೀಶ ಹೇಳಿದರು.