Wrestlers Protest: ಕುಸ್ತಿಪಟುಗಳ ಬೆನ್ನಿಗೆ ನಿಂತ ರೈತರು!
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ರೈತರು
ನ್ಯಾಯ ಸಿಗುವ ವರೆಗೂ ಹೋರಾಟ: ರೈತ ನಾಯಕರು
ಬ್ರಿಜ್‌ಭೂಷಣ್ ಬಂಧನಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ
ನವದೆಹಲಿ(ಜೂ.02): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ರೈತ ನಾಯಕರು ಘೋಷಿಸಿದ್ದಾರೆ.
ಕುಸ್ತಿಪಟುಗಳ ಜಂತರ್ಮಂತರ್ನ ಹೋರಾಟ ಭಾರೀ ಹೈಡ್ರಾಮದೊಂದಿಗೆ ಕೊನೆಗೊಂಡ ಬಳಿಕ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ರೈತ ನಾಯಕರು ‘ಮಹಾ ಪಂಚಾಯತ್’ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದಾರೆ. ಪಂಜಾಬ್, ಹರ್ಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ಕಡೆಗಳ ರೈತರು ಮಹಾಪಂಚಾಯತ್ನಲ್ಲಿ ಪಾಲ್ಗೊಂಡಿದ್ದು, ಮತ್ತೆ ಪ್ರತಿಭಟಿಸಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮನವಿ ಸಲ್ಲಿಸಲು ಮತ್ತು ಬ್ರಿಜ್ಭೂಷಣ್ರನ್ನು ಬಂಧಿಸುವಂತೆ ಆಗ್ರಹಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಕುಸ್ತಿಪಟುಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಹರಿಧ್ವಾರದಲ್ಲಿ ಗಂಗಾ ನದಿಗೆ ಪದಕ ಎಸೆಯುವುದರಿಂದ ಹಿಂದೆ ಸರಿದಿದ್ದ ಕುಸ್ತಿಪಟುಗಳು, ಬ್ರಿಜ್ ಬಂಧಿಸಲು ಸರ್ಕಾರಕ್ಕೆ 5 ದಿನದ ಗಡುವು ನೀಡಿದ್ದರು.
ಸರ್ಕಾರದಿಂದ ಸೂಕ್ಷ್ಮ ನಡೆ: ಸಚಿವ ಠಾಕೂರ್
ಕುಸ್ತಿಪಟುಗಳ ಪ್ರಕರಣವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕುಸ್ತಿಪಟುಗಳ ಎಲ್ಲಾ ಬೇಡಿಕೆ ಪೂರೈಸಲಾಗಿದೆ. ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವವರ ಬಗ್ಗೆ ಠಾಕೂರ್ ಕಿಡಿಕಾರಿದ್ದು, ‘ಕಾನೂನು ಎಲ್ಲರಿಗೂ ಸಮಾನ ಮತ್ತು ಎಲ್ಲಾ ಕ್ರೀಡಾಪಟುಗಳು ನಮಗೆ ಅಗತ್ಯ. ಮೋದಿ ಸರ್ಕಾರ ಕ್ರೀಡೆಯ ಬಜೆಟ್ ಹೆಚ್ಚಿಸಿದೆ. ಇದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ’ ಎಂದು ಕುಟುಕಿದ್ದಾರೆ.
ಕಿರಿಯರ ಏಷ್ಯಾಕಪ್ ಹಾಕಿ: ಪಾಕಿಸ್ತಾನ ಮಣಿಸಿದ ಭಾರತ ಚಾಂಪಿಯನ್
ಕುಸ್ತಿಪಟುಗಳ ಹೇಳಿಕೆ ಬದಲಾಗುತ್ತಿದೆ: ಬ್ರಿಜ್
ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಬ್ರಿಜ್‌ಭೂಷಣ್ ಪ್ರತಿಕ್ರಿಯಿಸಿದ್ದು, ಕುಸ್ತಿಪಟುಗಳು ನಿರಂತರವಾಗಿ ತಮ್ಮ ಆರೋಪ, ಬೇಡಿಕೆಗಳನ್ನು ಬದಲಾಯಿಸುತ್ತಲೇ ಇದ್ದಾರೆ ಎಂದಿದ್ದಾರೆ. ‘ಪ್ರತಿಭಟನೆ ಆರಂಭಿಸಿದಾಗ ಇದ್ದ ಬೇಡಿಕೆ ಕೆಲ ದಿನಗಳಲ್ಲೇ ಬದಲಾಯಿಸಿದರು. ಬಳಿಕ ಬೇರೆ ಬೇರೆ ಬೇಡಿಕೆಗಳನ್ನಿಡಲು ಶುರು ಮಾಡಿದರು. ನಾನು ಯಾವಾಗ, ಎಲ್ಲಿ, ಏನು ಮಾಡಿದ್ದೇನೆ ಎಂದು ಕುಸ್ತಿಪಟುಗಳಲ್ಲಿ ಕೇಳಿದರೂ ನಿರ್ದಿಷ್ಟ ಉತ್ತರ ನೀಡಿಲ್ಲ’ ಎಂದು ಕಿಡಿಕಾರಿದ್ದು, ತಪ್ಪು ಸಾಬೀತಾದರೆ ನೇಣಿಗೇರುವುದಾಗಿ ಪುನರುಚ್ಚರಿಸಿದ್ದಾರೆ.
ಸರ್ಫಿಂಗ್: ಕಿಶೋರ್, ದಿನೇಶ್ಗೆ ಜಯ
ಮಂಗಳೂರು: ಇಲ್ಲಿನ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ಗುರುವಾರ ಆರಂಭವಾದ 4ನೇ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕ, ತಮಿಳುನಾಡಿನ ಸರ್ಫರ್‌ಗಳು ಮೇಲುಗೈ ಸಾಧಿಸಿದ್ದಾರೆ.
ಅಂಡರ್-16 ಬಾಲಕರ ವಿಭಾಗದಲ್ಲಿ ಚೆನ್ನೈನ 15 ವರ್ಷದ ಕಿಶೋರ್ ಕುಮಾರ್(12.67 ಅಂಕ)ಅತಿ ಹೆಚ್ಚು ಅಂಕ ಗಳಿಸಿದ ಸರ್ಫರ್ ಎನಿಸಿದ್ದು, ಪುರುಷರ ಮುಕ್ತ ವಿಭಾಗದಲ್ಲಿ ದಿನೇಶ್ ಸೆಲ್ವಮಣಿ (9.53 ಅಂಕ) 2ನೇ ಸುತ್ತಿಗೇರಿದರು. ಉಳಿದಂತೆ ತಾಯಿನ್ ಅರುಣ್(10.83), ಶೇಖರ್ ಪಿಚೈ(9), ಹರೀಶ್ (8.63), ಸೆಲ್ವಂ ಎಂ.(8.53) ಕೂಡಾ ಗೆಲುವು ಸಾಧಿಸಿದರು. ಒಟ್ಟು 12 ಮಂದಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದು, ಅವರು ಕಳೆದ ಬಾರಿಯ ಪ್ರದರ್ಶನದ ಅಧಾರದಲ್ಲಿ ಈಗಾಗಲೇ 2ನೇ ಸುತ್ತಿಗೇರಿರುವ 16 ಮಂದಿ ಜೊತೆ ಶುಕ್ರವಾರ ಸ್ಪರ್ಧಿಸಲಿದ್ದಾರೆ. ಮಳೆಯಿಂದಾಗಿ ಸಮುದ್ರದ ಅಲೆಯಲ್ಲಿ ಏರಿಳಿತ ಕಂಡುಬಂದ ಕಾರಣ ಮಹಿಳೆಯರ ಸ್ಪರ್ಧೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.