ವಿಜಯ್ ಮಲ್ಯ ಸಹಮಾಲೀಕತ್ವದ ಫೋರ್ಸ್ ಇಂಡಿಯಾ ಎಫ್ 1 ರೇಸ್ ತಂಡ ಮಾರಾಟಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಭಾರತದ ಏಕೈಕ ಎಫ್1 ರೇಸ್ ತಂಡ ಇದೀಗ ವಿದೇಶಿ ಪಾಲಾಗೋ ಸಾಧ್ಯತೆ ದಟ್ಟವಾಗಿದೆ. ಅಷ್ಟಕ್ಕೂ ಫೋರ್ಸ್ ಇಂಡಿಯಾ ಮಾರಾಟಕ್ಕೆ ಮಲ್ಯ ಆರ್ಥಿಕ ಸಂಕಷ್ಟವೇ ಕಾರಣನಾ?ಇಲ್ಲಿದೆ ವಿವರ.
ನವದೆಹಲಿ(ಜು.25): ಫಾರ್ಮುಲಾ 1 ರೇಸಿಂಗ್‌ನಲ್ಲಿ ಸದ್ಯ ಭಾರತದ ಪ್ರಾತಿನಿಧ್ಯವಿದೆ ಎಂದು ಹೇಳುವುದಾದರೆ ಅದು ಫೋರ್ಸ್ ಇಂಡಿಯಾ ತಂಡದಿಂದ ಮಾತ್ರ. ವಿಜಯ್ ಮಲ್ಯ ಸಹ ಮಾಲೀಕತ್ವದ ತಂಡ ಎಫ್1 ದುಬಾರಿ ಅಗತ್ಯತೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಲ್ಯ ಆರ್ಥಿಕ ಸಂಕಷ್ಟದಲ್ಲಿದ್ದು, ಜರ್ಮನಿಯ ಆಟೋಮೊಬೈಲ್ ಪತ್ರಿಕೆ ‘ಆಟೋ ಬಿಲ್ಡ್’ ವರದಿ ಪ್ರಕಾರ ಫೋರ್ಸ್ ಇಂಡಿಯಾ ತಂಡವನ್ನು ಮಾರಾಟ ಮಾಡಲಾಗುತ್ತಿದೆ.
ಕೆನಡಾ ಮೂಲದ ಫ್ಯಾಷನ್ ಉದ್ಯಮಿ ಲಾರೆನ್ಸ್ ಸ್ಟ್ರಾಲ್ ತಂಡವನ್ನು ಖರೀದಿಸಲು ದೊಡ್ಡ ಮೊತ್ತದ ಪ್ರಸ್ತಾಪವಿಟ್ಟಿದ್ದಾರೆ ಎಂದು ವರದಿಯಾಗಿದೆ. ಲಾರೆನ್ಸ್‌ರ ಪುತ್ರ ಲ್ಯಾನ್ಸ್ ಸ್ಟ್ರಾಲ್ ಸದ್ಯ ವಿಲಿಯಮ್ಸ್ ತಂಡದ ಚಾಲಕರಾಗಿದ್ದಾರೆ.
ಮೂಲಗಳ ಪ್ರಕಾರ, ಎಫ್ 1 ಚಾಲಕನಾಗಬೇಕು ಎನ್ನುವ ಆಸೆಯನ್ನು ಈಡೇರಿಸಿಕೊಳ್ಳಲು ಲ್ಯಾನ್ಸ್, ಸ್ವತಃ ತಾವೇ ವಿಲಿಯಮ್ಸ್ ತಂಡಕ್ಕೆ ವಾರ್ಷಿಕ 25 ಮಿಲಿಯನ್ ಡಾಲರ್ (₹172 ಕೋಟಿ) ಪಾವತಿಸುತ್ತಾರೆ ಎನ್ನಲಾಗಿದೆ. ಇದೀಗ ಮಗನಿಗಾಗಿ ಎಫ್ 1 ತಂಡವನ್ನೇ ಖರೀದಿಸಲು ಲಾರೆನ್ಸ್ ಮುಂದಾಗಿದ್ದು, ಸದ್ಯದಲ್ಲೇ ಫೋರ್ಸ್ ಇಂಡಿಯಾ ತಂಡದ ಮಾಲೀಕತ್ವ ಪಡೆಯಲಿದ್ದಾರೆ ಎಂದು ಜರ್ಮನಿಯ ಪತ್ರಿಕೆಯ ವರದಿ ತಿಳಿಸಿದೆ.
