ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿನ ರೋಚಕ ಸೋಲಿನಿಂದಾಗಿ ಮೂರು ಪಂದ್ಯ ಸರಣಿಯನ್ನು ಈಗಾಗಲೇ 0-2 ಅಂತರದಿಂದ ಕೈಚೆಲ್ಲಿದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯ ನಾಳೆ ನಡೆಯಲಿದ್ದು, ಕ್ಲೀನ್‌ಸ್ವೀಪ್ ಗುರಿ ಹೊತ್ತಿರುವ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಎದುರು ಇಯಾನ್ ಮಾರ್ಗನ್ ಪಡೆ ಒತ್ತಡಕ್ಕೆ ಸಿಲುಕಿದೆ.
ಕೋಲ್ಕತಾ (ಜ.21): ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿನ ರೋಚಕ ಸೋಲಿನಿಂದಾಗಿ ಮೂರು ಪಂದ್ಯ ಸರಣಿಯನ್ನು ಈಗಾಗಲೇ 0-2 ಅಂತರದಿಂದ ಕೈಚೆಲ್ಲಿದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯ ನಾಳೆ ನಡೆಯಲಿದ್ದು, ಕ್ಲೀನ್ಸ್ವೀಪ್ ಗುರಿ ಹೊತ್ತಿರುವ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಎದುರು ಇಯಾನ್ ಮಾರ್ಗನ್ ಪಡೆ ಒತ್ತಡಕ್ಕೆ ಸಿಲುಕಿದೆ.
ಇಲ್ಲಿನ ಐತಿಹಾಸಿಕ ತಾಣ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಹೊನಲು ಬೆಳಕಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಆ ಮೂಲಕ ಮೂರು ಚುಟುಕು ಪಂದ್ಯಗಳ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಆಂಗ್ಲರು ಎಣಿಸಿದ್ದರೆ, ವಿರಾಟ್ ಪಡೆ ಅದಕ್ಕೆ ಆಸ್ಪದ ಕಲ್ಪಿಸದಿರಲು ನಿರ್ಧರಿಸಿದೆ.
ಈ ಬಾರಿಯ ಭಾರತ ಪ್ರವಾಸದಲ್ಲಿನ ಮೊದಲೆರಡು ಸರಣಿಗಳನ್ನು ಸೋತು ಕಳೆಗುಂದಿರುವ ಇಂಗ್ಲೆಂಡ್ ಮರಳಿ ಆತ್ಮವಿಶ್ವಾಸ ಪಡೆಯಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಆದರೆ, ಸತತ ಎರಡು ಪಂದ್ಯಗಳ ಗೆಲುವಿನಿಂದ ಉತ್ಸಾಹದ ಚಿಲುಮೆಯಾಗಿರುವ ಕೊಹ್ಲಿ ಬಳಗ ಹ್ಯಾಟ್ರಿಕ್ ಜಯಭೇರಿಯ ಗುಂಗಿನಲ್ಲಿದೆ. ಪಿಚ್ ಬಹುತೇಕ ವೇಗಿಗಳಿಗೆ ಸ್ಪಂದಿಸುವ ಸಾಧ್ಯತೆ ಇದ್ದು, ಇಬ್ಬನಿಯ ಪರಿಣಾಮ ಪಂದ್ಯದ ಎರಡನೇ ಇನ್ನಿಂಗ್ಸ್ ಕೌತುಕ ಕೆರಳಿಸುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಅಂದಹಾಗೆ ಈ ಪಂದ್ಯದಲ್ಲೂ ರನ್ ಹೊಳೆ ಹರಿಯುವ ಸಂಭವವಿದೆ ಎನ್ನಲಾಗಿದೆ.
ಪ್ರಬಲ ಜತೆಯಾಟದ ಬಲ
ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೇದಾರ್ ಜಾಧವ್ ಅವರ 200 ರನ್ಗಳ ಜತೆಯಾಟದಿಂದ 350 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ಭಾರತ, ಕಟಕ್ನಲ್ಲಿ ಜರುಗಿದ ದ್ವಿತೀಯ ಪಂದ್ಯದಲ್ಲಿ ಮಾಜಿ ನಾಯಕ ಧೋನಿ ಮತ್ತು ಯುವರಾಜ್ ಸಿಂಗ್ ಅವರ 256 ರನ್ಗಳ ಜತೆಯಾಟದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಧೋನಿ ಹಾಗೂ ಯುವರಾಜ್ ಅಂತೂ ಈ ಸರಣಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಮೊದಲ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಆಟವಾಡಿದರೆ, ಎರಡನೇ ಪಂದ್ಯದಲ್ಲಿ ಕೇವಲ ೮ ರನ್ಗೆ ವಿಕೆಟ್ ಒಪ್ಪಿಸಿದ್ದರು. ಇತ್ತ, ಎರಡೂ ಪಂದ್ಯಗಳಲ್ಲಿ ಆರಂಭಿಕರಾದ ಶಿಖರ್ ಧವನ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ತೀವ್ರ ಒತ್ತಡದಲ್ಲಿದ್ದು, ಈ ಕೊನೆಯ ಪಂದ್ಯ ಅವರಿಗೆ ಸತ್ವಪರೀಕ್ಷೆಯಾಗಿದೆ. ಒಟ್ಟಾರೆ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ, ಬೌಲಿಂಗ್ನಲ್ಲಿಯೂ ಸಮತೋಲಿತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಗೆಲುವು ಸಾಧಿಸುವ ನೆಚ್ಚಿನ ತಂಡವೆನಿಸಿದೆ.
ಅಸಹಾಯಕ ಸ್ಥಿತಿಯಲ್ಲಿ ಇಂಗ್ಲೆಂಡ್
ಹಾಗೆ ನೋಡಿದರೆ, ಬ್ಯಾಟಿಂಗ್ನಲ್ಲಿ ಅಷ್ಟೇನೂ ಕಳಪೆ ಆಟವಾಡದ ಇಂಗ್ಲೆಂಡ್, ಮೊದಲೆರಡು ಪಂದ್ಯಗಳ ಸೋಲಿನಿಂದ ದಿಗ್ಭ್ರಮೆಗೊಂಡಿದ್ದು ಟೀಂ ಇಂಡಿಯಾವನ್ನು ಕಟ್ಟಿಹಾಕುವ ಪರಿ ಹೇಗೆಂಬ ಚಿಂತೆಯಲ್ಲಿ ಮುಳುಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಆತಿಥೇಯರು ನೀಡುತ್ತಿರುವ ಪ್ರದರ್ಶನದಿಂದ ಹೈರಾಣಾಗಿರುವ ಇಂಗ್ಲೆಂಡ್ಗೆ ಇದೀಗ ಕ್ಲೀನ್ಸ್ವೀಪ್ ಭೀತಿಯೂ ಆವರಿಸಿದ್ದು, ಅದರಿಂದ ಪಾರಾಗಲು ಕಟ್ಟಕಡೆಯ ಅವಕಾಶ ಈ ಪಂದ್ಯ. ಇನ್ನು, ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿ ತಂಡದ ಪರ ಹೋರಾಟ ನಡೆಸಿದ್ದ ಮಾರ್ಗನ್, ಕೊನೆಗೂ ಸರಣಿಯನ್ನು ಜೀವಂತವಾಗಿಡಲು ವಿಫಲವಾಗಿದ್ದರು. ಬ್ಯಾಟಿಂಗ್ಗೆ ಹೋಲಿಸಿದರೆ, ಬೌಲಿಂಗ್ನಲ್ಲಿ ಇನ್ನಷ್ಟು ಮೊನಚಿನ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇಂಗ್ಲೆಂಡ್ ತಂಡದ ಮೇಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಮೈದಾನದಲ್ಲಿ ಆಡಿದ ಕಳೆದ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಒಂದರಲ್ಲಿಯೂ ಗೆದ್ದಿಲ್ಲ.
ಜಾನಿ ಬೇರ್ಸ್ಟೋಗೆ ಸ್ಥಾನ
ಇನ್ನು ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದ ವಿರುದ್ಧದ ಮುಂದಿನ ಸೀಮಿತ ಓವರ್ಗಳ ಪಂದ್ಯಗಳಿಂದ ಹೊರಬಿದ್ದಿರುವ ಆರಂಭಿಕ ಅಲೆಕ್ಸ್ ಹೇಲ್ಸ್ ಬದಲಿಗೆ ಜಾನಿ ಬೇರ್ಸ್ಟೋ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ಮೂರು ಏಕದಿನ ಪಂದ್ಯ ಸರಣಿಯನ್ನು ಕಳೆದುಕೊಂಡಿರುವ ಆಂಗ್ಲರ ಪಾಳೆಯದಲ್ಲಿ ಮೂರು ಚುಟುಕು ಪಂದ್ಯಗಳಿಗೆ ಜಾನಿ ಬೇರ್ಸ್ಟೋ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಉಭಯರ ಚುಟುಕು ಸರಣಿಯ ಮೊದಲ ಪಂದ್ಯ ಜ.26ರಂದು ನಡೆಯಲಿದೆ.
ಸಂಭವನೀಯರ ಪಟ್ಟಿ
ಭಾರತ
ಅಜಿಂಕ್ಯ ರಹಾನೆ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಯುವರಾಜ್ ಸಿಂಗ್, ಎಂ.ಎಸ್. ಧೋನಿ (ವಿಕೆಟ್ಕೀಪರ್), ಮನೀಶ್ ಪಾಂಡೆ / ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್ ರ್ಯಾಂಕ್
ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಜಾನಿ ಬೇರ್ಸ್ಟೋ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಡೇವಿಡ್ ವಿಲ್ಲೆ ಮತ್ತು ಜೇಕ್ ಬಾಲ್.
ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್
