ಕರಾಚಿ(ಅ.05): ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಎಲ್ಲಾ ಸಭೆಗಳಿಂದ ಭಾರತೀಯ ಕ್ರಿಕೆಟ್ ಮಂಡಳಿಯನ್ನು (ಬಿಸಿಸಿಐ) ಬಹಿಷ್ಕರಿಸುವಂತೆ ಐಸಿಸಿಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಒತ್ತಡ ಹೇರಬೇಕೆಂದು ಐಸಿಸಿ ಮಾಜಿ ಅಧ್ಯಕ್ಷ, ಪಾಕಿಸ್ತಾನದ ಎಹಸಾನ್ ಮಣಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ‘‘ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಲಿಚ್ಛಿಸುವುದಿಲ್ಲ’’ ಎಂದಿದ್ದರು. ಠಾಕೂರ್ ಅವರ ಈ ಹೇಳಿಕೆಗೆ ಕಂಡಾಮಂಡಲವಾಗಿರುವ ಮಣಿ, ‘‘ಠಾಕೂರ್ ಆಡಳಿತ ಪಕ್ಷದ ಸಂಸದ. ಆದರೆ, ಬಿಸಿಸಿಐನಂಥ ಕ್ರೀಡಾ ಸಂಸ್ಥೆಯೊಂದರ ಅಧ್ಯಕ್ಷಗಿರಿಯಲ್ಲಿ ಕುಳಿತಿರುವ ಅವರು ಐಸಿಸಿಯ ಇತರ ಸದಸ್ಯ ಕ್ರಿಕೆಟ್ ಮಂಡಳಿಗಳನ್ನು ಟೀಕಿಸುವುದು ಐಸಿಸಿ ಸಂವಿಧಾನಕ್ಕೆ ಅಪಚಾರ ಎಸಗಿದಂತೆ. ಠಾಕೂರ್ ಅಧಿಕಾರದ ಪರಿಮಿತಿಗಳ ಬಗ್ಗೆ ಮುಂದಿನ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಅವರನ್ನು ಆಗ್ರಹಿಸಬೇಕು’’ ಎಂದಿದ್ದಾರೆ.
‘‘ಭಾರತವು ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳ ಗ್ರೂಪ್ ಹಂತದ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಆಡುವುದಿಲ್ಲಎಂದು ಹೇಳುತ್ತಿದೆ. ಆದರೆ, ನಾನು ಭಾರತದೊಂದಿಗೆ ಪಾಕಿಸ್ತಾನ ಯಾವುದೇ ಟೂರ್ನಿಯ ಗುಂಪು ಹಂತದಲ್ಲಿಯೂ ಆಡಕೂಡದು ಎಂದು ಕಳೆದ ಹತ್ತು ವರ್ಷಗಳಿಂದ ಆಗ್ರಹಿಸುತ್ತಿದ್ದೇನೆ’’ ಎಂದಿದ್ದಾರೆ. ಇನ್ನು, ‘‘ಭಾರತ- ಪಾಕಿಸ್ತಾನ ಕ್ರಿಕೆಟ್ ಸರಣಿಯಿಂದ ಹೆಚ್ಚಿನ ಲಾಭವಿರುವುದು ಭಾರತಕ್ಕೇ. ಆದರೂ ಅದು ನಮ್ಮೊಂದಿಗೆ (ಪಿಸಿಬಿ) ಕ್ರಿಕೆಟ್ ಬೇಡವೆಂದು ಹೇಳುತ್ತಿದೆ’’ ಎಂದು ಹೇಳಿದ್ದಾರೆ.
