Dubai Open 2023: ಸಾನಿಯಾ ಮಿರ್ಜಾಗೆ ಸೋಲಿನ ವಿದಾಯ!
ಎರಡು ದಶಕಗಳ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಬದುಕು ಅಂತ್ಯ
ದುಬೈ ಓಪನ್‌ನ ಮಹಿಳಾ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡ ಸಾನಿಯಾ ಜೋಡಿ
ಆಸ್ಪ್ರೇಲಿಯನ್ ಓಪನ್ ಬಳಿಕ ಗ್ರ್ಯಾನ್ ಸ್ಲಾಂಗೆ ಗುಡ್‌ಬೈ ಹೇಳಿದ್ದ ಸಾನಿಯಾ ಮಿರ್ಜಾ
ದುಬೈ(ಫೆ.22): ಭಾರತದ ದಿಗ್ಗಜ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ 20 ವರ್ಷಗಳ ವೃತ್ತಿಬದುಕನ್ನು ಸೋಲಿನೊಂದಿಗೆ ಮುಕ್ತಾಯಗೊಳಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ದುಬೈ ಓಪನ್‌ನ ಮಹಿಳಾ ಡಬಲ್ಸ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಜೊತೆ ಕಣಕ್ಕಿಳಿದ ಸಾನಿಯಾ, ಮೊದಲ ಸುತ್ತಿನಲ್ಲಿ ರಷ್ಯಾದ ಕುಡೆರ್‌ಮೊಟೊವಾ, ಸ್ಯಾಮ್ಸನೊವಾ ಜೋಡಿ ವಿರುದ್ಧ 4-6, 0-6 ಸೆಟ್‌ಗಳಲ್ಲಿ ಸೋಲುಂಡರು.
ಆಸ್ಪ್ರೇಲಿಯನ್ ಓಪನ್ ಬಳಿಕ ಗ್ರ್ಯಾನ್ ಸ್ಲಾಂಗೆ ಗುಡ್‌ಬೈ ಹೇಳಿದ್ದ ಸಾನಿಯಾ, ದುಬೈ ಓಪನ್ ಬಳಿಕ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಈ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿದಾಯ ಹೇಳುವ ಅವರ ಆಸೆ ಈಡೇರಲಿಲ್ಲ.
2003ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಸಾನಿಯಾ, 2013ರ ವರೆಗೂ ಸಿಂಗಲ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದರು. ಆದರೆ ಅವರಿಗೆ ಹೆಚ್ಚು ಯಶಸ್ಸು ದೊರೆತಿದ್ದು ಡಬಲ್ಸ್ ವಿಭಾಗದಲ್ಲಿ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ತಲಾ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನವನ್ನೂ ಅಲಂಕರಿಸಿದ್ದರು.
ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆ 2015ರಲ್ಲಿ ವಿಂಬಲ್ಡನ್, ಯುಎಸ್ ಓಪನ್, 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಸಾನಿಯಾ, ಮಹೇಶ್ ಭೂಪತಿ ಜೊತೆ 2009ರಲ್ಲಿ ಆಸ್ಪ್ರೇಲಿಯನ್ ಓಪನ್, 2012ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. 2014ರಲ್ಲಿ ಬ್ರೆಜಿಲ್‌ನ ಬ್ರುನೊ ಸೊರೆಸ್ ಜೊತೆ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಗ್ರ್ಯಾನ್ ಸ್ಲಾಂನ ಮಹಿಳಾ ಡಬಲ್ಸ್‌ನಲ್ಲಿ ಒಮ್ಮೆ, ಮಿಶ್ರ ಡಬಲ್ಸ್‌ನಲ್ಲಿ 5 ಬಾರಿ ರನ್ನರ್-ಅಪ್ ಕೂಡಾ ಆಗಿದ್ದಾರೆ.
ಟೆನಿಸ್ ಪಂದ್ಯ ವೀಕ್ಷಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ 5ನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಪಂದ್ಯವನ್ನು ವೀಕ್ಷಿಸಿದರು. ನಗರದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್ಟಿಎ)ಗೆ ಸಚಿವ, ರಾಜ್ಯ ಟೆನಿಸ್ ಸಂಸ್ಥೆ ಅಧ್ಯಕ್ಷ ಆರ್.ಅಶೋಕ್ ಜೊತೆ ಆಗಮಿಸಿದ ಅವರು, ಭಾರತದ ದಿಗ್ಗಜ ಟೆನಿಸಿಗ ವಿಜಯ್ ಅಮೃತರಾಜ್ ಅವರೊಂದಿಗೆ ಕೆಲ ಕಾಲ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.
ಪ್ರಜ್ನೇಶ್, ಪ್ರಜ್ವಲ್‌ಗೆ ಸೋಲಿನ ಆಘಾತ
ಬೆಂಗಳೂರು: ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ನೇಶ್ ಗುಣೇಶ್ವರನ್, ಕರ್ನಾಟಕದ ಪ್ರಜ್ವಲ್ ದೇವ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್ನಲ್ಲಿ ದೇವ್, ಚೈನೀಸ್ ತೈಪೆಯ ಜೇಸನ್ ಜಂಗ್ ವಿರುದ್ಧ 2-6, 2-6 ಸೆಟ್ಗಳಿಂದ ಪರಾಭವಗೊಂಡರು.
ಪ್ರಜ್ನೇಶ್ ಕ್ರೊವೇಶಿಯಾದ ಹಮದ್ ಮೆಡ್ಜೊಡೋವಿಚ್ ವಿರುದ್ಧ 3-6, 4-6ರಿಂದ ಸೋಲನುಭವಿಸಿದರು. ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಸ್ಪ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಶುಭಾರಂಭ ಮಾಡಿದರು. ಆದರೆ ದಿಗ್ಗಜ ಆಟಗಾರ ಸ್ವಿಡನ್ನ ಬ್ಯೊರ್ನ್ ಬೊಗ್‌ರ್ ಅವರ ಪುತ್ರ ಲಿಯೊ ಬೊಗ್‌ರ್ ಆರಂಭಿಕ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದರು.