ಪ್ಯಾರಾ ಅಥ್ಲೀಟ್‌ಗಳು ಮುಂದಿಟ್ಟಿರುವ ಪ್ರತ್ಯೇಕ ಕ್ರೀಡಾಂಗಣ ಬೇಡಿಕೆಯನ್ನ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಹಲವು ದಶಕಗಳ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ.
ಬೆಂಗಳೂರು(ನ.21): ಕಳೆದ ತಿಂಗಳು ಇಂಡೋನೇಷ್ಯಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 9 ಪದಕ ಗೆದ್ದ ರಾಜ್ಯದ ಅಥ್ಲೀಟ್‌ಗಳನ್ನು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಮಂಗಳವಾರ(ನ.20) ಸನ್ಮಾನಿಸಿದರು.
ತಮ್ಮ ಗೃಹಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನ ವಿಜೇತೆ ರಕ್ಷಿತಾ ಆರ್., ಬೆಳ್ಳಿ ಮತ್ತು ಕಂಚಿನ ಪದಕ ವಿಜೇತೆ ವಿ.ರಾಧಾ, ಕಂಚಿನ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ಎನ್.ಎಸ್.ರಮ್ಯಾ, ಕಂಚು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ ಆನಂದ್‌ಕುಮಾರ್, ಚಿನ್ನ ವಿಜೇತ ಚೆಸ್‌ಪಟು ಕಿಶನ್ ಗಂಗೊಳ್ಳಿ, ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ವಿಜೇತ ಫರ್ಮಾನ್ ಬಾಷಾ ಹಾಗೂ ಸಕೀನಾ ಖಾಟೂನ್‌ರನ್ನು ಪರಮೇಶ್ವರ್ ಅಭಿನಂದಿಸಿದರು.
‘ಪ್ಯಾರಾ ಅಥ್ಲೀಟ್‌ಗಳು ಸರ್ಕಾರದ ಮುಂದಿಟ್ಟಿರುವ ಪ್ರತ್ಯೇಕ ಕ್ರೀಡಾಂಗಣ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕ್ರೀಡಾಳುಗಳಿಗೆ ಸರ್ಕಾರದ ಪ್ರೋತ್ಸಾಹ ಸದಾ ಇರುತ್ತದೆ’ ಎಂದು ಪರಮೇಶ್ವರ್ ಹೇಳಿದರು.
