ನವದೆಹಲಿ(ಅ.05): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಪಣ ತೊಟ್ಟಿರುವ ನ್ಯಾ. ಆರ್.ಎಂ. ಲೋಧಾ ಸಮಿತಿ ಮೂಲಸೌಕರ‍್ಯದ ಹೆಸರಿನಲ್ಲಿ ಬಿಸಿಸಿಐ ನೀಡಿರುವ ಹಣವನ್ನು ‘ವರ್ಗಾಯಿಸುವುದಾಗಲೀ ಇಲ್ಲವೇ ಅದನ್ನು ಬಳಸುವುದಾಗಲೀ’ ಮಾಡಕೂಡದೆಂದು ಲೋಧಾ ದೇಶದಲ್ಲಿನ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸ್ಪಷ್ಟಸೂಚನೆ ನೀಡಿದ್ದಾರೆ ಎಂದು ‘ನ್ಯೂಸ್ 18’ ವರದಿ ಮಾಡಿದೆ.
‘‘10ರಿಂದ 20 ಕೋಟಿ ರು. ಮೊತ್ತವು ಪ್ರತೀ ಸಂಸ್ಥೆಗಳಿಗೂ ಮೂಲಸೌಕರ‍್ಯದ ಸಬ್ಸಿಡಿ ಹೆಸರಿನಲ್ಲಿ ಬಿಸಿಸಿಐ ಈಗಾಗಲೇ ಹಣವನ್ನು ವರ್ಗಾಯಿಸಿದೆ. ಅಂತೆಯೇ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ರದ್ದಾದ ಹಿನ್ನೆಲೆಯಲ್ಲಿ 28 ಕೋಟಿ ರು. ಪರಿಹಾರ ಕೂಡ ನೀಡಲಾಗಿದೆ. ಈ ಎಲ್ಲ ದೊಡ್ಡಮೊತ್ತದ ವಹಿವಾಟನ್ನು ಆರ್‌ಟಿಜಿಎಸ್ 29 ಸೆಪ್ಟೆಂಬರ್ ಮತ್ತು ಅಕ್ಟೋಬರ್ 1ರ ನಡುವೆ ತರಾತುರಿಯಲ್ಲಿ ನಡೆಸಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿವೆ’’ ಎಂದು ಇ-ಮೇಲ್ ಮೂಲಕ ಕ್ರಿಕೆಟ್ ಸಂಸ್ಥೆಗಳಿಗೆ ಲೋಧಾ ಸಮಿತಿ ತಿಳಿಸಿದೆ.
‘‘ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಟೇಟಸ್ ರಿಪೋರ್ಟ್ ಅನ್ನು ಅ. 6ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಇಂಥ ವೇಳೆಯಲ್ಲಿ ನ್ಯಾಯಾಲಯದ ಹಾಗೂ ಸಮಿತಿಯ ಸ್ಪಷ್ಟಸೂಚನೆಯನ್ನೂ ಉಲ್ಲಂಘಿಸಿ ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವ ಹಣಕಾಸನ್ನು ಬಳಸುವುದಾಗಲೀ ಇಲ್ಲವೇ ಅದನ್ನು ಅದಲುಬದಲು ಮಾಡುವುದಾಗಲೀ ಮಾಡುವಂತಿಲ್ಲ. ಒಂದೊಮ್ಮೆ ಇದನ್ನು ಮೀರಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ’’ ಎಂದು ಲೋಧಾ ಸಮಿತಿ ಪುನರುಚ್ಚರಿಸಿದೆ.
