ಜೈಪುರ(ಏ.20): ಸಮಯ ಓಡುತ್ತಿದ್ದು ರಾಜಸ್ಥಾನ ರಾಯಲ್ಸ್‌ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಎದುರಾಳಿ ವಿರುದ್ಧ ಮಾತ್ರವಲ್ಲ, ಕೆಲ ಆಂತರಿಕ ಸಮಸ್ಯೆಗಳ ವಿರುದ್ಧವೂ ಹೋರಾಡಬೇಕಿದೆ. 
ಶನಿವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿರುವ ರಾಯಲ್ಸ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 8 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ರಾಜಸ್ಥಾನ, ಪ್ಲೇ-ಆಫ್‌ಗೇರಬೇಕಿದ್ದರೆ ಇನ್ನುಳಿದ ಆರೂ ಪಂದ್ಯಗಳಲ್ಲಿ ಗೆಲ್ಲಬೇಕು. ಜತೆಗೆ ಉತ್ತಮ ನೆಟ್‌ ರನ್‌ರೇಟ್‌ ಸಹ ಸಾಧಿಸಬೇಕಿದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಕ್ಷೇತ್ರರಕ್ಷಣೆ ಮೂರೂ ವಿಭಾಗದಲ್ಲಿ ತಂಡ ಎಡವುತ್ತಿದೆ.

ಮತ್ತೊಂದೆಡೆ ಟೂರ್ನಿ ಪ್ರಮುಖ ಹಂತ ತಲುಪುತ್ತಿದ್ದಂತೆ ಲಯ ಕಂಡುಕೊಂಡಿರುವ ಮುಂಬೈ, ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿ ಕಾಕ್‌ ಸ್ಫೋಟಕ ಆಟವಾಡುತ್ತಿದ್ದಾರೆ. ಪಾಂಡ್ಯ ಸಹೋದರರು, ಬುಮ್ರಾ ಹಾಗೂ ಮಾಲಿಂಗ ಭರ್ಜರಿ ಲಯದಲ್ಲಿದ್ದು, ತಂಡದ ಯಶಸ್ಸಿಗೆ ನೆರವಾಗುತ್ತಿದ್ದಾರೆ.

ಪಿಚ್‌ ರಿಪೋರ್ಟ್‌

ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದ ಪಿಚ್‌ನಲ್ಲಿ ರನ್‌ ಗಳಿಸುವುದು ಸುಲಭವಲ್ಲ. ಇಲ್ಲಿ ಈ ವರ್ಷ ನಡೆದಿರುವ 4 ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ. 4 ಪಂದ್ಯಗಳ ಪೈಕಿ 3ರಲ್ಲಿ 2ನೇ ಬ್ಯಾಟಿಂಗ್‌ ನಡೆಸಿದ ತಂಡ ಗೆಲುವು ಸಾಧಿಸಿದೆ. ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಒಟ್ಟು ಮುಖಾಮುಖಿ: 19

ರಾಜಸ್ಥಾನ: 09

ಮುಂಬೈ: 10

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ತ್ರಿಪಾಠಿ, ಬಟ್ಲರ್‌, ಸ್ಯಾಮ್ಸನ್‌, ರಹಾನೆ (ನಾಯಕ), ಟರ್ನರ್‌, ಆರ್ಚರ್‌, ಬಿನ್ನಿ, ಶ್ರೇಯಸ್‌, ಉನಾದ್ಕತ್‌, ಕುಲಕರ್ಣಿ, ಸೋಧಿ.

ಮುಂಬೈ: ರೋಹಿತ್‌ (ನಾಯಕ), ಡಿಕಾಕ್‌, ಕಟ್ಟಿಂಗ್‌, ಸೂರ್ಯ, ಕೃನಾಲ್‌, ಹಾರ್ದಿಕ್‌, ಪೊಲ್ಲಾರ್ಡ್‌, ಚಾಹರ್‌, ಜಯಂತ್‌, ಬುಮ್ರಾ, ಮಾಲಿಂಗ.