ಕೊನೆರು ಹಂಪಿಯನ್ನು ಮಣಿಸಿ ದಿವ್ಯಾ ದೇಶ್‌ಮುಖ್ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಗೆದ್ದಿದ್ದಾರೆ. ಟೈಬ್ರೇಕರ್‌ನಲ್ಲಿ 1.5-0.5 ಅಂತರದಲ್ಲಿ ಜಯ ಸಾಧಿಸಿದರು. ಈ ಮೂಲಕ ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಮಹಿಳಾ ಚೆಸ್ ಪಟು ಎನಿಸಿಕೊಂಡರು.
ಬಟುಮಿ(ಜಾರ್ಜಿಯಾ): ಭಾರತದ ಅನುಭವಿ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿಯನ್ನು ರೋಚಕವಾಗಿ ಮಣಿಸಿದ 19 ವರ್ಷದ ದಿವ್ಯಾ ದೇಶ್‌ಮುಖ್ 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಮಹಿಳಾ ಚೆಸ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಮೊದಲ ಮಹಿಳಾ ಚೆಸ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ದಿವ್ಯಾ ದೇಶ್‌ಮುಖ್ ಹಾಗೂ ಕೊನೆರು ಹಂಪಿ ನಡುವಿನ ಮಹಿಳಾ ವಿಶ್ವಕಪ್ ಚೆಸ್‌ನ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದವು. ಇಬ್ಬರು ಭಾರತೀಯರ ನಡುವೆ ಶನಿವಾರ ನಡೆದಿದ್ದ ಫೈನಲ್‌ನ ಮೊದಲ ಗೇಮ್ ಡ್ರಾಗೊಂಡಿತ್ತು. ಭಾನುವಾರದ 2ನೇ ಗೇಮ್ ಕೂಡಾ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ಫಲಿತಾಂಶ ನಿರ್ಧರಿಸಲು ಇವರಿಬ್ಬರ ನಡುವೆ ಸೋಮವಾರ ಟೈ ಬ್ರೇಕರ್ ಮೊರೆ ಹೋಗಲಾಯಿತು.
ಇನ್ನು ಮೊದಲ ಟೈ ಬ್ರೇಕರ್ ಯಾಪಿಡ್ ಗೇಮ್ ಕೂಡಾ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಎರಡನೇ ಟೈ ಬ್ರೇಕರ್‌ನಲ್ಲಿ ಅನುಭವಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಸಮಯದ ಒತ್ತಡದಲ್ಲಿ ಕೊಂಚ ಎಡವಿದರು. ಇದರ ಲಾಭ ಪಡೆದ ದಿವ್ಯಾ ದೇಶ್‌ಮುಖ್ 1.5-0.5 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಇದರ ಜತೆಗೆ ದಿವ್ಯಾ ದೇಶ್‌ಮುಖ್ ಗ್ರ್ಯಾಂಡ್‌ಮಾಸ್ಟರ್ ಪಟ್ಟವನ್ನು ಅಲಂಕರಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಪಡೆದಿದ್ದ ದಿವ್ಯಾ ದೇಶ್‌ಮುಖ್ ಇದೀಗ ಭಾರತದ 88ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
ಭಾರತದ 19 ವರ್ಷದ ದಿವ್ಯಾ ಗುರುವಾರ ಸೆಮಿಫೈನಲ್‌ನಲ್ಲಿ ಚೀನಾದ ಝಾಂಗ್‌ಯೀ ಟಾನ್ ವಿರುದ್ಧ ಗೆದ್ದಿದ್ದರು. ಈ ಮೂಲಕ ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇದೀಗ ಭಾರತದವರೇ ಆದ ಕೊನೆರು ಹಂಪಿಯನ್ನು ಸೋಲಿಸುವ ಮೂಲಕ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಸಾಧನೆ ಮಾಡಿದ್ದಾರೆ.
ಯಾರು ಈ ದಿವ್ಯಾ ದೇಶ್‌ಮುಖ್?
ಫಿಡೆ ಮಹಿಳಾ ವಿಶ್ವಕಪ್ ಫೈನಲ್‌ಗೇರಿದ ಅತಿ ಕಿರಿಯ ಆಟಗಾರ್ತಿ ದಿವ್ಯಾ.
2024ರಲ್ಲಿ ಫಿಡೆ ಅಂಡರ್-20 ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನ. ಭಾರತದ ನಂ.4 ಆಟಗಾರ್ತಿ ದಿವ್ಯಾ ದೇಶ್‌ಮುಖ್.
