ಬೆಂಗಳೂರು[ಏ.16]: ವಿಶ್ವಕಪ್ ಟೂರ್ನಿಗೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿ ನ್ಯಾಯ ಒದಗಿಸಿದೆ ಎಂದು ಕನ್ನಡಿಗ ಹಾಗೂ ಕೋಲ್ಕತಾ ನೈಟ್’ರೈಡರ್ಸ್ ತಂಡದ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ಇಂಗ್ಲೆಂಡ್’ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮೀಸಲು ವಿಕೆಟ್’ಕೀಪಿಂಗ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್ ಹಾಗೂ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಗೂ ಅನುಭವಕ್ಕೆ ಮಣೆಹಾಕಿದ ಆಯ್ಕೆ ಸಮಿತಿ ಕಾರ್ತಿಕ್’ಗೆ ಅವಕಾಶ ನೀಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಉತ್ತಪ್ಪ, ಕಳೆದೆರಡು ವರ್ಷಗಳಿಂದ ಕಾರ್ತಿಕ್ ಬೆಸ್ಟ್ ಫಿನೀಶರ್ ಆಗಿ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸುತ್ತಾ ಬಂದಿದ್ದಾರೆ. ಹೀಗಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅರ್ಹತೆ ಕಾರ್ತಿಕ್ ಅವರಿಗಿದೆ ಎಂದು ಹೇಳಿದ್ದಾರೆ.

ಪಂತ್ ಬದಲು ಕಾರ್ತಿಕ್- ಆಯ್ಕೆ ಸಮಿತಿ ಬಿಟ್ಟಿಟ್ಟ ಕಾರಣ!

ಅರ್ಹತೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಕಾರ್ತಿಕ್ ಉತ್ತಮ ಆಯ್ಕೆ. ಕಾರ್ತಿಕ್ ಆಯ್ಕೆ ಮಾಡುವ ಮೂಲಕ ಆಯ್ಕೆ ಸಮಿತಿ ನ್ಯಾಯ ಒದಗಿಸಿದೆ ಎಂದು ಉತ್ತಪ್ಪ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಮೀಸಲು ವಿಕೆಟ್’ಕೀಪರ್ ಆಗಿ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್, ಒಂದು ವೇಳೆ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದರೆ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಹೇಳಿದ್ದರು.