ರವಿ ಶಾಸ್ತ್ರಿ ಹಾಗೂ ಕೊಹ್ಲಿಗಾಗಿ ನಿಯಮ ಉಲ್ಲಂಘಿಸಿದ ಬಿಸಿಸಿಐ!

ಟೀಂ ಇಂಡಿಯಾ ಕೋಚ್ ಆಯ್ಕೆಯಲ್ಲಿ ಬಿಸಿಸಿಐ ನಿಯಮ ಉಲ್ಲಂಘಿಸಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.  ಕೋಚ್ ಆಗಿದ್ದ ಅನಿಲ್ ಕುಂಬ್ಳೆಗೆ ಕೊಕ್ ನೀಡಿ, ರವಿ ಶಾಸ್ತ್ರಿ ಆಯ್ಕೆಯಲ್ಲಿ ಹಲವು ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಇಲ್ಲಿದೆ ಈ ಕುರಿತ ಡೀಟೇಲ್ಸ್.

Diana Edulji reveals secret behind coach Ravi shastri Selection

ನವದೆಹಲಿ(ಡಿ.13): ರವಿಶಾಸ್ತ್ರಿಯನ್ನೇ ಭಾರತ ತಂಡದ ಕೋಚ್‌ ಆಗಿ ನೇಮಿಸಬೇಕು ಎನ್ನುವ ಕಾರಣಕ್ಕೆ ಬಿಸಿಸಿಐ ನಿಯಮ ಉಲ್ಲಂಘಿಸಿತ್ತು ಎಂದು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಗಂಭೀರ ಆರೋಪ ಮಾಡಿದ್ದಾರೆ. 

ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಯ್ಕೆ ವಿಚಾರದಲ್ಲಿ ನಡೆಯುತ್ತಿರುವ ಗದ್ದಲದಲ್ಲಿ ಭಾಗಿಯಾಗಿರುವ ಎಡುಲ್ಜಿ, ‘ಕೋಚ್‌ ಆಯ್ಕೆಗೆ ಕೊಹ್ಲಿಗೆ ನೀಡಿದ ಸ್ವಾತಂತ್ರ್ಯವನ್ನು ಹರ್ಮನ್‌ಪ್ರೀತ್‌ಗೆ ಏಕೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿ, ಶಾಸ್ತ್ರಿ ಆಯ್ಕೆ ವೇಳೆ ನಡೆದ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ. ಕೋಚ್‌ ಅನಿಲ್‌ ಕುಂಬ್ಳೆಯೊಂದಿಗೆ ಮನಸ್ತಾಪ ಹೊಂದಿದ್ದ ನಾಯಕ ವಿರಾಟ್‌ ಕೊಹ್ಲಿ, ಬಿಸಿಸಿಐ ಸಿಇಓ ರಾಹುಲ್‌ ಜೋಹ್ರಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದರು. 

ಕುಂಬ್ಳೆ ಜತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು ಎನ್ನುವ ವಿಷಯವನ್ನು ಎಡುಲ್ಜಿ ಬಹಿರಂಗಗೊಳಿಸಿದ್ದಾರೆ. ‘ಒಂದು ವರ್ಷದ ಅವಧಿ ಮುಕ್ತಾಯಗೊಂಡ ಬಳಿಕ ಕುಂಬ್ಳೆ ಮತ್ತೊಮ್ಮೆ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸಚಿನ್‌, ಗಂಗೂಲಿ, ಲಕ್ಷ್ಮಣ್‌ ಒಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ ಕುಂಬ್ಳೆ ಹೆಸರನ್ನೇ ಶಿಫಾರಸು ಮಾಡಿತ್ತು. 

ಆದರೆ ಕೊಹ್ಲಿ ಇದಕ್ಕೆ ಒಪ್ಪಲಿಲ್ಲ. ಶಾಸ್ತ್ರಿ ಕೋಚ್‌ ಆಗಬೇಕು ಎಂದು ಪಟ್ಟು ಹಿಡಿದರು. ಬಳಿಕ ರವಿ ಶಾಸ್ತ್ರಿ ಅರ್ಜಿ ಸಲ್ಲಿಸುವ ವರೆಗೂ ಗಡುವು ವಿಸ್ತರಣೆ ಮಾಡಿ, ಕೊಹ್ಲಿ ಇಚ್ಛೆಯಂತೆ ಬಿಸಿಸಿಐ ನಡೆದುಕೊಂಡಿತು’ ಎಂದು ಎಡುಲ್ಜಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios