ಸೋಮವಾರ ನಡೆಯಲಿರುವ ಫೈನಲ್‌'ನಲ್ಲಿ ಬಂಗಾಳ ತಂಡ, ತಮಿಳುನಾಡನ್ನು ಎದುರಿಸಲಿದೆ.

ನವದೆಹಲಿ(ಮಾ.18): ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಆಕರ್ಷಕ ಅರ್ಧಶತಕ ಹೊರತಾಗಿಯೂ ಜಾರ್ಖಂಡ್ ತಂಡ, ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮೀಸ್‌'ನಲ್ಲಿ ಬಂಗಾಳ ಎದುರು ಮುಗ್ಗರಿಸಿದೆ.

ಆರಂಭಿಕ ಆಟಗಾರ ಶ್ರೀವತ್ಸ್ ಗೋಸ್ವಾಮಿ (101) ಮತ್ತು ಅಭಿಮನ್ಯು ಈಶ್ವರನ್ (101) ಅವರ ಭರ್ಜರಿ ಬ್ಯಾಟಿಂಗ್ ಮತ್ತು ಸ್ಪಿನ್ನರ್ ಪ್ರಗ್ಯಾನ್ ಓಜಾ (71/5) ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಬಂಗಾಳ ತಂಡ, ಜಾರ್ಖಂಡ್ ವಿರುದ್ಧ 41ರನ್‌'ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಸೋಮವಾರ ನಡೆಯಲಿರುವ ಫೈನಲ್‌'ನಲ್ಲಿ ಬಂಗಾಳ ತಂಡ, ತಮಿಳುನಾಡನ್ನು ಎದುರಿಸಲಿದೆ.

ಆರಂಭಿಕ ಬ್ಯಾಟ್ಸ್‌ಮನ್‌'ಗಳ ಭರ್ಜರಿ ಶತಕ ಮತ್ತು ಮನೋಜ್ ತಿವಾರಿ (75)ರನ್‌'ಗಳ ನೆರವಿನಿಂದ ಬಂಗಾಳ ತಂಡ 4 ವಿಕೆಟ್‌ಗೆ 329 ರನ್‌'ಗಳ ದೊಡ್ಡ ಮೊತ್ತ ದಾಖಲಿಸಿತು. ನಂತರ ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡಕ್ಕೆ ಕುಮಾರ್ ದೆಬ್ರೋಟ್ (37), ಸೌರಭ್ ತಿವಾರಿ (48), ನಾಯಕ ಎಂ.ಎಸ್. ಧೋನಿ (70), ಇಶಾಂಕ್ ಜಗ್ಗಿ (59)ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳ ನೀರಸ ಪ್ರದರ್ಶನ ತಂಡವನ್ನು ಸೋಲಿನ ದವಡೆಗೆ ದೂಡಿತು.

ಬಂಗಾಳ ಪರ ಓಜಾ 5, ಕನಿಶ್ಕ್ ಸೇಥ್, ಸಾಯಾನ್ ಘೋಶ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಂಗಾಳ : 329/4

(ಶ್ರೀವತ್ಸ್ ಗೋಸ್ವಾಮಿ 101, ಅಭಿಮನ್ಯು 101, ವರುಣ್ 89/2)

ಜಾರ್ಖಂಡ್ :288

(ಧೋನಿ 70, ಇಶಾಂಕ್ ಜಗ್ಗಿ 59, ಪ್ರಗ್ಯಾನ್ ಓಜಾ 71/5)