ನಿಜ್ನಿನೊವ್ಗೊರೊಡ್: ಪೆನಾಲ್ಟಿ ಶೂಟೌಟ್‌ನಲ್ಲಿ ಡೆನ್ಮಾರ್ಕ್ ತಂಡವನ್ನು 3-2 ಗೋಲುಗಳ ಅಂತರ ದಿಂದ ಸೋಲಿಸಿದ ಕ್ರೊವೇಷಿಯಾ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಈ ಮೂಲಕ ತಂಡ ಫಿಫಾ ವಿಶ್ವಕಪ್‌ನಲ್ಲಿ 1998ರ ಬಳಿಕ ಮೊದಲ ಬಾರಿಗೆ ಈ ಸಾಧನೆ ಮಾಡಿತು.

ಭಾನುವಾರ ರಾತ್ರಿ ಡೆನ್ಮಾರ್ಕ್ ಮತ್ತು ಕ್ರೊವೇಷಿಯಾ ನಡುವಿನ ಪ್ರಿಕ್ವಾರ್ಟರ್ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು.ಪಂದ್ಯದ ಪೂರ್ಣಾವಧಿಯ ವೇಳೆಗೆ 2 ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದವು. ತಂಡಗಳಿಗೆ ನೀಡಿದ ಹೆಚ್ಚುವರಿ 30 ನಿಮಿಷಗಳಲ್ಲಿಯೂ ಫಲಿತಾಂಶ ಹೊರಬೀಳಲಿಲ್ಲ.

ಆದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಡೆನ್ಮಾರ್ಕ್‌ನ ಮಥಿಯಾಸ್ ಜೊರ್ಗೆನ್ಸನ್ ಮೊದಲ ನಿಮಿಷದಲ್ಲೇ ಗೋಲು ಗಳಿಸಿ, ವಿಶ್ವಕಪ್‌ನಲ್ಲಿ ವೇಗದ ಗೋಲು ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾದರು.

ಆದರೆ ಈ ಸಂಭ್ರಮ ಬಹಳ ಹೊತ್ತು ಉಳಿಯಲಿಲ್ಲ. ಚುರುಕಿನ ಆಟವಾಡಿದ ಕ್ರೊವೇಷಿಯಾ, ಮರಿಯೋ ಮ್ಯಾಂಜುಕಿಕ್ 4ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ 1-1ರ ಸಮಬಲ ಸಾಧಿಸಿತು. 

ಪಂದ್ಯದ ಆರಂಭಿಕ 5 ನಿಮಿಷಗಳಲ್ಲೇ 2 ಗೋಲುಗಳು ದಾಖಲಾಗಿದ್ದು ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿತು. ಆದರೆ ಮತ್ತೊಮ್ಮೆ ಗೋಲು ಬಾರಿಸಲು ಉಭಯ ತಂಡಗಳು ವಿಫಲವಾಗಿದ್ದರಿಂದ, ಪೆನಾಲ್ಟಿ ಶೂಟೌಟ್ ಪಂದ್ಯದ ಫಲಿತಾಂಶ ನಿರ್ಧರಿಸಿತು.