ಜೈಪುರ[ಏ.20]: ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 161 ರನ್ ಬಾರಿಸಿದ್ದು, ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡಕ್ಕೆ ಕನ್ನಡಿಗ ಶ್ರೇಯಸ್ ಗೋಪಾಲ್ ಆರಂಭದಲ್ಲೇ ಆಘಾತ ನೀಡಿದರು. ನಾಯಕ ರೋಹಿತ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆದರೆ ಆ ಬಳಿಕ ಜತೆಯಾದ ಸೂರ್ಯಕುಮಾರ್ ಯಾದವ್- ಕ್ವಿಂಟನ್ ಡಿ ಕಾಕ್ ಜೋಡಿ ಸ್ಮಿತ್ ಬೌಲಿಂಗ್ ಪಡೆಯನ್ನು ಅನಾಯಾಸವಾಗಿ ಎದುರಿಸಿತು. ಎರಡನೇ ವಿಕೆಟ್’ಗೆ ಈ ಜೋಡಿ 98 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್ 34 ರನ್ ಬಾರಿಸಿ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರೆ, ಡಿ ಕಾಕ್ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 65 ರನ್ ಬಾರಿಸಿ ಗೋಪಾಲ್’ಗೆ ಎರಡನೇ ಬಲಿಯಾದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 23, ಕಟ್ಟಿಂಗ್ಸ್ 13 ಹಾಗೂ ಕಿರಾನ್ ಪೊಲ್ಲಾರ್ಡ್ 10 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ನೆರವಾದರು.

ರಾಜಸ್ಥಾನ ರಾಯಲ್ಸ್ ಪರ ಕನ್ನಡಿಗರಾದ ಶ್ರೇಯಸ್ ಗೋಪಾಲ್ 2 ಹಾಗೂ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರೆ, ಜೋಪ್ರಾ ಆರ್ಚರ್ ಮತ್ತು ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಮುಂಬೈ ಇಂಡಿಯನ್ಸ್: 161/5
ಡಿಕಾಕ್ 65
ಗೋಪಾಲ್: 21/2