ದೆಹಲಿ(ಸೆ. 16): ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇಆಫ್'ನಲ್ಲಿ ಸ್ಪೇನ್ ವಿರುದ್ಧ ಭಾರತ ಹಿನ್ನಡೆ ಅನುಭವಿಸಿದೆ. ಇಂದು ಆರಂಭಗೊಂಡ ಹಣಾಹಣಿಯ ಮೊದಲ ಸಿಂಗಲ್ಸ್'ನಲ್ಲಿ ಸ್ಪೇನ್'ನ ಫೆಲಿಶಿಯಾನೋ ಲೋಪೆಜ್ ಅವರು ಭಾರತದ ರಾಮಕುಮಾರ್ ರಾಮನಾಥನ್ ಅವರನ್ನು 6-4, 6-4, 3-6, 6-1ರಿಂದ ಸೋಲಿಸಿದರು. ಈ ಮೂಲಕ ಡೇವಿಸ್ ಕಪ್ ಪಂದ್ಯದಲ್ಲಿ ಸ್ಪೇನ್ 1-0 ಮುನ್ನಡೆ ಪಡೆದಿದೆ. ಯಾವುದೇ ಗೆಲುವಿನ ನಿರೀಕ್ಷೆ ಇಲ್ಲದಿದ್ದರೂ ಯುವ ಪ್ರತಿಭೆ ರಾಮಕುಮಾರ್ ರಾಮನಾಥನ್ ವೀರೋಚಿತ ಹೋರಾಟ ತೋರಿ ಗಮನ ಸೆಳೆದರು. ತನಗಿಂತಲೂ 193 ಶ್ರೇಯಾಂಕದಷ್ಟು ಎತ್ತರದಲ್ಲಿರುವ ವಿಶ್ವದ ಟಾಪ್ ಆಟಗಾರನ ವಿರುದ್ಧದ ಪಂದ್ಯದಲ್ಲಿ ಒಂದು ಸೆಟ್ ಗೆದ್ದಿರುವುದು ಸಾಮಾನ್ಯ ಸಾಧನೆಯಲ್ಲ. ಪಂದ್ಯದುದ್ದಕ್ಕೂ ರಾಮಕುಮಾರ್ ತಮ್ಮ ಬಲಿಷ್ಠ ಸರ್ವ್'ಗಳಿಂದ ಎದುರಾಳಿಯನ್ನು ಅಚ್ಚರಿಗೊಳಿಸಿದರು.

ನಡಾಲ್ ಇಲ್ಲ:
ಸ್ಪೇನ್'ನ ರಾಫೇಲ್ ನಡಾಲ್ ಅವರನ್ನು ಭಾರತೀಯ ಯುವ ಟೆನಿಸ್ ಪ್ರತಿಭೆಗಳು ಹೇಗೆ ಎದುರಿಸುತ್ತಾರೆಂದು ಕುತೂಹಲದಿಂದ ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಹೊಟ್ಟೆ ನೋವಿನ ಕಾರಣವೊಡ್ಡಿ ನಡಾಲ್ ಅವರು ಭಾರತ ವಿರುದ್ಧದ ಡೇವಿಸ್ ಕಪ್'ನ ಮೊದಲ ಸಿಂಗಲ್ಸ್'ನಲ್ಲಿ ಆಡಲು ನಿರಾಕರಿಸಿದರು. ಆದರೆ, ರಿವರ್ಸ್ ಸಿಂಗಲ್ಸ್'ನಲ್ಲಾದರೂ ನಡಾಲ್ ಆಡುತ್ತಾರಾ ಎಂಬ ಕುತೂಹಲವಿದೆ.