ಟಿ20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಈಗ 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಹೆಡ್ ಕೋಚ್ ಗೌತಮ್ ಗಂಭೀರ್ ಪ್ರಕಾರ, ಐಪಿಎಲ್ ನಂತರವೇ ತಂಡದ ಬ್ಲೂಪ್ರಿಂಟ್ ಸಿದ್ಧವಾಗಲಿದ್ದು, ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಆಟಗಾರರಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

ಅಹಮದಾಬಾದ್: ಟಿ20 ವಿಶ್ವಕಪ್ ಗೆದ್ದಾಯ್ತು, ಈಗ ಟೀಂ ಇಂಡಿಯಾದ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್. ಈ ಬಗ್ಗೆ ಮಾತನಾಡಿರುವ ಹೆಡ್ ಕೋಚ್ ಗೌತಮ್ ಗಂಭೀರ್, ತಂಡದ ತಯಾರಿ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಮಾರ್ಚ್ ಕೊನೆಯಲ್ಲಿ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ಮುಗಿದ ನಂತರವೇ ವಿಶ್ವಕಪ್‌ಗೆ ತಂಡದ ಬ್ಲೂ ಪ್ರಿಂಟ್ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಈ ವಿಶ್ವಕಪ್‌ಗೂ ಮುನ್ನ ಭಾರತ ಸುಮಾರು 25 ರಿಂದ 30 ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವೇಗದ ಮತ್ತು ಬೌನ್ಸ್ ಇರುವ ಪಿಚ್‌ಗಳಲ್ಲಿ ಆಡುವುದು ಸುಲಭವಲ್ಲ ಎಂದು ಗಂಭೀರ್ ಹೇಳಿದ್ದಾರೆ. '2027ರ ವಿಶ್ವಕಪ್‌ಗೆ ನಮ್ಮ ಪ್ಲ್ಯಾನಿಂಗ್ ಶುರುವಾಗುವುದೇ ಐಪಿಎಲ್ ನಂತರ. ಈ ಅವಧಿಯಲ್ಲಿ ನಮಗೆ ಸಿಗುವ ಏಕದಿನ ಪಂದ್ಯಗಳನ್ನು ಸರಿಯಾಗಿ ಬಳಸಿಕೊಳ್ಳುತ್ತೇವೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಆಟಗಾರರನ್ನು ಗುರುತಿಸಿ, ಸರಿಯಾದ ಟೀಮ್ ಕಾಂಬಿನೇಷನ್ ರೂಪಿಸಬೇಕಿದೆ. ಮೇ ತಿಂಗಳ ಅಂತ್ಯದ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ' ಎಂದು ಗಂಭೀರ್ ವಿವರಿಸಿದ್ದಾರೆ.

ರೋಹಿತ್ ಮತ್ತು ವಿರಾಟ್ ಮೇಲೆ ಎಲ್ಲರ ಕಣ್ಣು

ಜೂನ್ 14 ರಿಂದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯೊಂದಿಗೆ ಭಾರತ ಮತ್ತೆ ಈ ಫಾರ್ಮ್ಯಾಟ್‌ಗೆ ಮರಳಲಿದೆ. ಕಳೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದವರೆಗೆ ತಲುಪಿದ್ದ ಅಫ್ಘಾನಿಸ್ತಾನ, ಭಾರತಕ್ಕೆ ಖಂಡಿತವಾಗಿಯೂ ಕಠಿಣ ಸವಾಲು ಒಡ್ಡಲಿದೆ. ಈ ಸರಣಿಯಲ್ಲಿ ಎಲ್ಲರ ಕಣ್ಣು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನದ ಮೇಲಿದೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರು.

ಕಳೆದ ಕೆಲವು ಪಂದ್ಯಗಳಲ್ಲಿ ರನ್ ಗಳಿಸಲು ಕಷ್ಟಪಟ್ಟಿದ್ದ ರೋಹಿತ್, ಬಲವಾದ ಕಮ್‌ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ತೂಕ ಇಳಿಸಿಕೊಂಡು ಮುಂಬೈನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಟಿ20 ವಿಶ್ವಕಪ್‌ನ ಶ್ರೇಷ್ಠ ಆಟಗಾರನಾಗಿ ಆಯ್ಕೆಯಾದ ಸಂಜು ಸ್ಯಾಮ್ಸನ್‌ರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಾಯ ಜೋರಾಗಿದೆ. ಹಾಗೇನಾದರೂ ಆದರೆ, ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಮಾತ್ರ ಸಂಜು ಅವರಂತಹ ಆಟಗಾರರನ್ನು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಕೆ.ಎಲ್. ರಾಹುಲ್ ಏಕದಿನ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿ ಬಳಿಕ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಬೆಳೆಸಲಿದೆ. ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಈ ಪಂದ್ಯಗಳಲ್ಲಿನ ಪ್ರದರ್ಶನವನ್ನು ಆಧರಿಸಿ ಹಿರಿಯ ಆಟಗಾರರ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.

ಜೂನ್‌ 6ರಿಂದ ಆಫ್ಘನ್‌ ವಿರುದ್ಧ ಭಾರತಕ್ಕೆ 3 ಏಕದಿನ, 1 ಟೆಸ್ಟ್‌

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡ ಜೂನ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ ಏಕೈಕ ಟೆಸ್ಟ್‌ ಪಂದ್ಯ ಆಡಲಿದೆ. ಏಕೈಕ ಟೆಸ್ಟ್‌ ಪಂದ್ಯ ಜೂನ್‌ 6ರಿಂದ 10ರ ವರೆಗೆ ನವ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯಲಿದೆ.

3 ಪಂದ್ಯಗಳ ಏಕದಿನ ಸರಣಿ ಜೂ.14ಕ್ಕೆ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. 2ನೇ ಪಂದ್ಯ ಜೂ.17ರಂದು ಲಖನೌ ಕ್ರೀಡಾಂಗಣದಲ್ಲಿ ನಡೆಯಲಿದ್ದು, 3ನೇ ಪಂದ್ಯಕ್ಕೆ ಜೂ.20ರಂದು ಚೆನ್ನೈನ ಚೆಪಾಕ್‌ ಕ್ರೀಢಾಂಗಣ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.