ಬೆಂಗಳೂರು[ಏ.23]: ಒಬ್ಬ ಆಟಗಾರ ತಂಡದ ಅದೃಷ್ಟವನ್ನೇ ಬದಲಿಸಲು ಸಾಧ್ಯವೇ?. ಡೇಲ್‌ ಸ್ಟೇನ್‌ರಂತಹ ವಿಶ್ವ ಶ್ರೇಷ್ಠ ಕ್ರಿಕೆಟಿಗರಿಂದ ಖಂಡಿತ ಸಾಧ್ಯ. ಸ್ಟೇನ್‌ ಆಗಮನ ಆರ್‌ಸಿಬಿ ಬೌಲಿಂಗ್‌ ಪಡೆ ಈ ಹಿಂದಿಗಿಂತ ಬಹಳಷ್ಟುಬಲಿಷ್ಠವಾಗಿ ಮಾಡಿದೆ.

ಈ ಆವೃತ್ತಿಯಲ್ಲಿ ಮೊದಲ 6 ಪಂದ್ಯಗಳನ್ನು ಸೋತಿದ್ದ ಆರ್‌ಸಿಬಿಗೆ ದಿಕ್ಕೇ ತೋಚದಂತೆ ಆಗಿತ್ತು. 200 ರನ್‌ ಗಳಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಕಳಪೆ ಬೌಲಿಂಗ್‌. ಮೊದಲ 8 ಪಂದ್ಯಗಳಲ್ಲಿ ಆರ್‌ಸಿಬಿ ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್‌ ಮಾತ್ರ. ಕೋಲ್ಕತಾ ನೈಟ್‌ರೈಡ​ರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟೇನ್‌ ತಂಡ ಕೂಡಿಕೊಂಡರು. ಮೊದಲ ಓವರ್‌ನಲ್ಲೇ ವಿಕೆಟ್‌ ಕಿತ್ತು ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಆ ಪಂದ್ಯದ ಪವರ್‌-ಪ್ಲೇನಲ್ಲಿ ಆರ್‌ಸಿಬಿ 3 ವಿಕೆಟ್‌ ಕಬಳಿಸಿತು. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ 6 ಓವರಲ್ಲಿ ಆರ್‌ಸಿಬಿ 4 ವಿಕೆಟ್‌ ಕಬಳಿಸಿತು. ಸ್ಟೇನ್‌ ಮೊದಲ ಓವರಲ್ಲೇ 2 ಪ್ರಮುಖ ವಿಕೆಟ್‌ ಕಿತ್ತು ತಂಡಕ್ಕೆ ಆರಂಭಿಕ ಯಶಸ್ಸು ಒದಗಿಸಿದರು.

ಸ್ಟೇನ್‌ ಸೇರ್ಪಡೆಯಿಂದ ತಂಡದಲ್ಲಿ ಬದಲಾವಣೆ ಆಗಿದೆ ಎಂದು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಚೆನ್ನೈ ವಿರುದ್ಧ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಕೊಹ್ಲಿ, ‘10 ವರ್ಷಗಳ ಬಳಿಕ ಮತ್ತೆ ಸ್ಟೇನ್‌ ಜತೆ ಡ್ರೆಸ್ಸಿಂಗ್‌ ಕೋಣೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮೊದಲು ನೋಡಿದಾಗ ಅವರಿಲ್ಲದ ಉತ್ಸಾಹ ಈಗಲೂ ಕಡಿಮೆಯಾಗಿಲ್ಲ’ ಎಂದರು.

ಸ್ಟೇನ್‌ ಜತೆ ಚೆಂಡು ಹಂಚಿಕೊಳ್ಳುತ್ತಿರುವ ಯುವ ವೇಗಿ ನವ್‌ದೀಪ್‌ ಸೈನಿ ಕೂಡ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸದ್ಯದಲ್ಲೇ ಭಾರತ ತಂಡಕ್ಕೆ ಕಾಲಿಡುವ ಭರವಸೆ ಮೂಡಿಸಿರುವ ಸೈನಿಗೆ, ಸ್ಟೇನ್‌ರಿಂದ ಸಿಗುತ್ತಿರುವ ಮಾರ್ಗದರ್ಶನ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.