55 ತಾಸಲ್ಲಿ 430 ಕಿಮೀ ಸೈಕ್ಲಿಂಗ್..! ಎರಡು ಮಕ್ಕಳ ತಾಯಿಯಿಂದ ವಿಶ್ವದಾಖಲೆ
ಅಲ್ಟ್ರಾ ಸೈಕ್ಲಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪುಣೆಯ ಪ್ರೀತಿ ಮಾಸ್ಕೆ
ಲೇಹ್‌ನಿಂದ ಮನಾಲಿವರೆಗೆ 55 ಗಂಟೆ 13 ನಿಮಿಷಗಳಲ್ಲಿ ಏಕಾಂಗಿ ಸೈಕಲ್ ರೈಡ್
45 ವರ್ಷದ ಪ್ರೀತಿ ಅವರು ಗಿನ್ನೆಸ್ ವಿಶ್ವ ದಾಖಲೆಗೆ ಬೇಕಾದ 430 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ
ಲೇಹ್(ಜೂ.28): 2 ಮಕ್ಕಳ ತಾಯಿಯಾಗಿರುವ ಪುಣೆಯ ಪ್ರೀತಿ ಮಾಸ್ಕೆ ಅಲ್ಟ್ರಾ ಸೈಕ್ಲಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಲೇಹ್‌ನಿಂದ ಮನಾಲಿವರೆಗೆ 55 ಗಂಟೆ 13 ನಿಮಿಷಗಳಲ್ಲಿ ಏಕಾಂಗಿ ಸೈಕಲ್ ರೈಡ್ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
45 ವರ್ಷದ ಪ್ರೀತಿ ಅವರು ಗಿನ್ನೆಸ್ ವಿಶ್ವ ದಾಖಲೆಗೆ ಬೇಕಾದ 430 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರೀತಿ 6,000 ಕಿ.ಮೀ. ದೂರವನ್ನು ಒಳಗೊಂಡಿರುವ ಸುವರ್ಣ ಚತುಷ್ಪಥ ಮಾರ್ಗದಲ್ಲಿ ಅತಿ ವೇಗದ ಮಹಿಳಾ ಸೈಕ್ಲಿಸ್ಟ್ ಎಂಬ ದಾಖಲೆ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರೀತಿ ಅವರು ಜೂನ್ 22ರಂದು ಬೆಳಗ್ಗೆ 6 ಗಂಟೆಗೆ ಲೇಹ್‌ನಲ್ಲಿ ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ)ಯ ಅಧಿಕಾರಿಗಳ ಸಮ್ಮುಖದಲ್ಲಿ ಸೈಕ್ಲಿಂಗ್ ಆರಂಭಿಸಿದ್ದರು. ಜೂನ್ 24ರಂದು ಮಧ್ಯಾಹ್ನ 1.13ಕ್ಕೆ ಅವರು ಮನಾಲಿಯಲ್ಲಿ ಕೊನೆಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೀತಿ ತಮ್ಮ ಪಯಣದ ಮಧ್ಯೆ ಅತೀ ಎತ್ತರದ ರಸ್ತೆ ಎನಿಸಿಕೊಂಡಿರುವ 17,582 ಫೀಟ್ ಎತ್ತರದಲ್ಲಿರುವ ತಗ್ಲಾಂಗಲಾವನ್ನು ದಾಟಿದ್ದಾರೆ. ‘ಮಾರ್ಗ ಮಧ್ಯೆ ಉಸಿರಾಟದ ಸಮಸ್ಯೆ ಕಂಡುಬಂದಿದ್ದರಿಂದ 2 ಬಾರಿ ಆಕ್ಸಿಜನ್ ನೆರವು ಪಡೆದಿದ್ದೆ. ಬೇರೆ ಯಾವುದೇ ಸಮಸ್ಯೆ ನನಗೆ ಎದುರಾಗಲಿಲ್ಲ. ಸಾಧಿಸುವ ಮನಸ್ಸು ಮಾಡಿದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ’ ಎಂದು ಪ್ರೀತಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಕೈಗಳನ್ನು ಕಟ್ಟಿ ಪೆರಿಯರ್ ನದಿಯುದ್ದಕ್ಕೂ ಈಜಿ ಜೈಸಿದ 70ರ ಅಜ್ಜಿ
40ನೇ ವರ್ಷದಲ್ಲಿ ನನ್ನ ಅನಾರೋಗ್ಯವನ್ನು ಹೋಗಲಾಡಿಸಲು ಸೈಕ್ಲಿಂಗ್ ಆರಂಭಿಸಿದೆ. ನನ್ನೆಲ್ಲಾ ಭಯವನ್ನು ಹಿಮ್ಮೆಟ್ಟಿ ನಾನು ಈ ಸಾಧನೆ ಮಾಡಿದ್ದರೆ, ಖಂಡಿತಾ ಇದನ್ನು ಯಾವುದೇ ಮಹಿಳೆಗೂ ಸಾಧಿಸಬಹುದು -ಪ್ರೀತಿ ಮಾಸ್ಕೆ, ಸೈಕ್ಲಿಸ್ಟ್
ರಾಷ್ಟ್ರೀಯ ಈಜು: ರಾಜ್ಯಕ್ಕೆ 5 ಚಿನ್ನ ಸೇರಿ 23 ಪದಕಗಳು
ರಾಜ್‌ಕೋಟ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 5 ಚಿನ್ನ ಸೇರಿ 23 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಭಾನುವಾರ ರಾಜ್ಯದ ಶರಣ್ ಶ್ರೀಧರ್ 400 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಪಡೆದರೆ, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚು ಗೆದ್ದರು. ರಿಯಾಂಶ್ ಕಾಂತಿ 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ, 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚು ಜಯಿಸಿದರು. ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ ಅಲಿಸ್ಸಾ ಸ್ವೀಡಲ್ ರೆಗೊ ಬೆಳ್ಳಿ ಗೆದ್ದರು. ಕೂಟದಲ್ಲಿ ರಾಜ್ಯದ ಈಜುಪಟುಗಳು ಎಂಟು ಬೆಳ್ಳಿ, ಹತ್ತು ಕಂಚಿನ ಪದಕಗಳನ್ನೂ ಗೆದ್ದಿದ್ದು, ಪದಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದರು. ಮಹಾರಾಷ್ಟ್ರ ಅಗ್ರಸ್ಥಾನ ಪಡೆಯಿತು.