ಆಕ್ಲೆಂಡ್(ಜೂ.22): ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಲ್ಯೂಕ್ ರೊಂಚಿ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ವಿದಾಯ ಹೇಳಿದ್ದಾರೆ.

ಕುಟುಂಬದತ್ತ ಹೆಚ್ಚಿನ ಗಮನ ನೀಡಬೇಕಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ರೊಂಚಿ ತಿಳಿಸಿದ್ದಾರೆ.

ವಿಶೇಷವೆಂದರೆ ಕಿವೀಸ್ ಪರ ಆಡುವ ಮೊದಲು ರೊಂಚಿ, ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದರು.

2008ರಲ್ಲಿ ಆಸ್ಟ್ರೇಲಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌'ಗೆ ಪಾದಾರ್ಪಣೆ ಮಾಡಿದ್ದ ಅವರು 2012ರಲ್ಲಿ ಆಸೀಸ್ ತಂಡವನ್ನು ತೊರೆದು ನ್ಯೂಜಿಲೆಂಡ್ ತಂಡವನ್ನು ಸೇರಿಕೊಂಡಿದ್ದರು.

ನ್ಯೂಜಿಲೆಂಡ್ ಪರವಾಗಿ 4 ಟೆಸ್ಟ್, 85 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನಾಡಿರುವ ರೊಂಚಿ, ಆಸ್ಟ್ರೇಲಿಯಾ ಪರವಾಗಿ 4 ಏಕದಿನ ಹಾಗೂ 3 ಟಿ20 ಪಂದ್ಯವನ್ನಾಡಿದ್ದರು.

2015ರಲ್ಲಿ ರೊಂಚಿ ಶ್ರೀಲಂಕಾ ವಿರುದ್ಧ ಕೇವಲ 99 ಎಸೆತಗಳಲ್ಲಿ 170 ರನ್ ಸಿಡಿಸಿ ಮಿಂಚಿದ್ದರು. ರೊಂಚಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದರೂ ಇಂಗ್ಲೀಷ್ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಎನ್ನಲಾಗಿದೆ.