ಕಳೆದ ಮೇ ತಿಂಗಳ ವೇಳೆ ಢಾಕಾದಲ್ಲಿ ಸ್ಟಂಪ್ ಬಡಿದು 16 ವರ್ಷದ ಕ್ರಿಕೆಟಿಗ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.

ಚಿತ್ತಗಾಂಗ್(ಫೆ.06): ಕ್ರಿಕೆಟ್ ಆಟದಲ್ಲಿ ಔಟ್ ಆದೆನಲ್ಲಾ ಎಂಬ ಬೇಸರದಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್ ಒಬ್ಬರು ತಮ್ಮ ಬ್ಯಾಟನ್ನು ವಿಕೆಟ್ ಮೇಲೆ ಎಸೆದಿದ್ದರಿಂದ ಸ್ಟಂಪ್ ಚಿಮ್ಮಿದ ರಭಸಕ್ಕೆ ಸ್ಲಿಪ್‌'ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಯುವ ಕ್ರಿಕೆಟಿಗನಿಗೆ ಬಡಿದು ಸಾವು ಸಂಭವಿಸಿದ ಘಟನೆ ಬಾಂಗ್ಲಾದೇಶದ ಚಿತ್ತಗಾಂಗ್‌'ನಲ್ಲಿ ನಡೆದಿದೆ.

ಇಲ್ಲಿನ ಸೌತ್ ಈಸ್ಟರ್ನ್ ಪೋರ್ಟ್ ಸಿಟಿಯ ಮೈದಾನದಲ್ಲಿ ಎರಡು ದೇಶಿಯ ತಂಡಗಳ ನಡುವೆ ಸ್ನೇಹ ಸೌಹಾರ್ದಯುತ ಪಂದ್ಯ ನಡೆಯುತ್ತಿತ್ತು. ಈ ವೇಳೆ ಸ್ಲಿಪ್‌'ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ 14 ವರ್ಷ ವಯಸ್ಸಿನ ಫೈಸಲ್ ಹುಸೇನ್ ಅವರ ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಸ್ಟಂಪ್ ಬಡಿಯಿತು. ಕ್ಷಣ ಮಾತ್ರದಲ್ಲಿಯೇ ಫೈಸಲ್ ಮೈದಾನದಲ್ಲಿ ಕುಸಿದು ಬಿದ್ದರು.

ಪ್ರಜ್ಞಾಹೀನರಾಗಿ ಬಿದ್ದಿದ್ದ ಫೈಸಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಲ್ಲಾಗಲೇ ಫೈಸಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಎದುರಾಳಿ ತಂಡದ ಬ್ಯಾಟ್ಸ್‌ಮನ್ ಉದ್ದೇಶಪೂರ್ವಕವಾಗಿ ಈ ಕಾರ್ಯ ಮಾಡಿಲ್ಲ. ಅನಿರೀಕ್ಷಿತವಾಗಿ ಈ ಘಟನೆ ಜರುಗಿದೆ ಎಂದು ಸಹಾಯಕ ಪೊಲೀಸ್ ಕಮೀಷನರ್ ಜಹಾಂಗೀರ್ ಆಲಮ್ ಹೇಳಿದ್ದಾರೆ.

ಕಳೆದ ಮೇ ತಿಂಗಳ ವೇಳೆ ಢಾಕಾದಲ್ಲಿ ಸ್ಟಂಪ್ ಬಡಿದು 16 ವರ್ಷದ ಕ್ರಿಕೆಟಿಗ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.