ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ ನಷ್ಟಕ್ಕೆ 194 ರನ್‌ ಗಳಿಸಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಪರ ಶತಕ ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ದಾಖಲೆಯನ್ನು ಹರ್ಮನ್‌ಪ್ರೀತ್‌ ಬರೆದರೆ, ಭಾರತ ಈ ಮಾದರಿ ತನ್ನ 2ನೇ ಗರಿಷ್ಠ ಮೊತ್ತ ಕಲೆಹಾಕಿತು. 

ಗಯಾನ(ನ.10): ಐಸಿಸಿ ಟಿ20 ವಿಶ್ವಕಪ್‌ ಅನ್ನು ಭಾರತ ಮಹಿಳಾ ತಂಡ ಭರ್ಜರಿಯಾಗಿ ಆರಂಭಿಸಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬಾರಿಸಿದ ಅಮೋಘ ಶತಕದ ನೆರವಿನಿಂದ ಭಾರತ, ನ್ಯೂಜಿಲೆಂಡ್‌ ವಿರುದ್ಧ ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯವನ್ನು 34 ರನ್‌ಗಳಿಂದ ಗೆದ್ದುಕೊಂಡು ಶುಭಾರಂಭ ಮಾಡಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ ನಷ್ಟಕ್ಕೆ 194 ರನ್‌ ಗಳಿಸಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಪರ ಶತಕ ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ದಾಖಲೆಯನ್ನು ಹರ್ಮನ್‌ಪ್ರೀತ್‌ ಬರೆದರೆ, ಭಾರತ ಈ ಮಾದರಿ ತನ್ನ 2ನೇ ಗರಿಷ್ಠ ಮೊತ್ತ ಕಲೆಹಾಕಿತು.

ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌, ಭರ್ಜರಿ ಆರಂಭ ಪಡೆದುಕೊಂಡಿತು. ಸೂಜಿ ಬೇಟ್ಸ್‌ ಭರ್ಜರಿ ಹೊಡೆತಗಳ ಮೂಲಕ ಭಾರತೀಯರಲ್ಲಿ ಆತಂಕ ಮೂಡಿಸಿದರು. ದಯಾಳನ್‌ ಹೇಮಲತಾ, ಭಾರತಕ್ಕೆ ಮೊದಲ ವಿಕೆಟ್‌ ತಂದುಕೊಟ್ಟರು. ಒಂದು ಕಡೆ ಬೇಟ್ಸ್‌ ಆರ್ಭಟಿಸುತ್ತಿದ್ದರೆ ಮತ್ತೊಂದೆಡೆ ಭಾರತ ವಿಕೆಟ್‌ ಕಬಳಿಸುತ್ತಾ ಸಾಗಿತು. 50 ಎಸೆತಗಳಲ್ಲಿ 67 ರನ್‌ ಸಿಡಿಸಿದ ಬೇಟ್ಸ್‌ ಔಟಾದಾಗ ತಂಡದ ಮೊತ್ತ 98. ಕೊನೆಯಲ್ಲಿ ವಿಕೆಟ್‌ ಕೀಪರ್‌ ಕ್ಯಾಟಿ ಮಾರ್ಟಿನ್‌ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಿವೀಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲ ಎಸೆತವೇ ಬೌಂಡರಿ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತಕ್ಕೆ ಮೊದಲ ಎಸೆತದಲ್ಲೇ ಬೌಂಡರಿ ದೊರೆಯಿತು. ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ, ಪಂದ್ಯಾವಳಿಯ ಮೊದಲ ಎಸೆತವನ್ನು ಬೌಂಡರಿಗಟ್ಟಿದರು. 2011ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಎಸೆತವನ್ನು ವೀರೇಂದ್ರ ಸೆಹ್ವಾಗ್‌ ಬೌಂಡರಿಗಟ್ಟಿದ್ದರು. ತಾನಿಯಾ ಆ ನೆನಪು ಮರುಕಳಿಸುವಂತೆ ಮಾಡಿದರು. ವಿಶೇಷ ಎಂದರೆ 2011ರಲ್ಲಿ ಭಾರತ ವಿಶ್ವಕಪ್‌ ಗೆದ್ದಿತ್ತು.

ತಾನಿಯಾ (09) ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಸ್ಮೃತಿ ಮಂಧನಾ (02) ಕೈಸುಟ್ಟುಕೊಂಡರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ 18 ವರ್ಷದ ಜೆಮಿಮಾ ರೋಡ್ರಿಗಾಸ್‌ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ ತಮಿಳುನಾಡು ಆಟಗಾರ್ತಿ ದಯಾಳನ್‌ ಹೇಮಲತಾ 7 ಎಸೆತಗಳಲ್ಲಿ 2 ಬೌಂಡರಿ ಸಮೇತ 15 ರನ್‌ ಗಳಿಸಿ ತಂಡ ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಿದರು. 6 ಓವರ್‌ಗಳ ಪವರ್‌-ಪ್ಲೇ ಮುಕ್ತಾಯಕ್ಕೂ ಮೊದಲೇ ಹೇಮಲತಾ ಔಟಾದರು. ಭಾರತ 40 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತು.

ಹರ್ಮನ್‌-ಜೆಮಿಮಾ ಮಿಂಚಿನಾಟ: 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಜೆಮಿಮಾ ಕೂಡಿಕೊಂಡ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಎಚ್ಚರಿಕೆಯ ಆಟವಾಡಿದರು. ಮೊದಲ 13 ಎಸೆತಗಳಲ್ಲಿ ಹರ್ಮನ್‌ ಗಳಿಸಿದ್ದು 5 ರನ್‌ ಮಾತ್ರ. ಆದರೆ ಕ್ರೀಸ್‌ಗೆ ಒಗ್ಗಿಕೊಳ್ಳುತ್ತಿದ್ದಂತೆ ಹರ್ಮನ್‌ಪ್ರೀತ್‌ ಭರ್ಜರಿ ಹೊಡೆತಗಳಿಗೆ ಕೈಹಾಕಿದರು. 10 ಓವರ್‌ಗಳ ಮುಕ್ತಾಯಕ್ಕೆ ಭಾರತ 3 ವಿಕೆಟ್‌ ನಷ್ಟಕ್ಕೆ 73 ರನ್‌ ಗಳಿಸಿತು.

ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಹರ್ಮನ್‌ ಹಾಗೂ ಜೆಮಿಮಾ, ನ್ಯೂಜಿಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. 4ನೇ ವಿಕೆಟ್‌ಗೆ 62 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರೈಸಿದ ಈ ಜೋಡಿ, ಬಿರುಸಿನ ಆಟ ಮುಂದುವರಿಸಿತು. 4ನೇ ವಿಕೆಟ್‌ಗೆ ಹರ್ಮನ್‌ ಹಾಗೂ ಜೆಮಿಮಾ ದಾಖಲೆಯ 134 ರನ್‌ ಜೊತೆಯಾಟವಾಡಿದರು. 45 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 59 ರನ್‌ ಗಳಿಸಿದ ಜೆಮಿಮಾ 19ನೇ ಓವರ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

20ನೇ ಓವರ್‌ನಲ್ಲಿ ಹರ್ಮನ್‌ಪ್ರೀತ್‌ ಶತಕ ಪೂರೈಸಿದರು. 100 ರನ್‌ ಗಳಿಸಲು ಅವರು ತೆಗೆದುಕೊಂಡಿದ್ದು 49 ಎಸೆತಗಳನ್ನು ಮಾತ್ರ. 51 ಎಸೆತಗಳಲ್ಲಿ 7 ಬೌಂಡರಿ, 8 ಭರ್ಜರಿ ಸಿಕ್ಸರ್‌ಗಳ ನೆರವಿನೊಂದಿಗೆ 103 ರನ್‌ ಕಲೆಹಾಕಿದ ಹರ್ಮನ್‌ಪ್ರೀತ್‌ 20ನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು.

ನಿಗದಿತ 20 ಓವರ್‌ಗಳಲ್ಲಿ ಭಾರತ 5 ವಿಕೆಟ್‌ ಕಳೆದುಕೊಂಡು 194 ರನ್‌ ಕಲೆಹಾಕಿತು. ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ ಎನ್ನುವ ದಾಖಲೆ ಸಹ ಸೃಷ್ಟಿಯಾಯಿತು.