ಮುಂಬೈ(ನ.03): ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್, 2019ರ ಐಪಿಎಲ್ ಆಟಗಾರರ ಹರಾಜಿಗೆ ಹೆಸರು ನೋಂದಣಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೊದಲು ಅರ್ಜುನ್ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಖಚಿತವಾಗಿಲ್ಲ.

ಇತ್ತೀಚೆಗಷ್ಟೇ ಅವರು ಭಾರತ ಅಂಡರ್ -19 ತಂಡದ ಪರ ಆಡಿದ್ದರು. ಭಾರತ ‘ಎ’ ತಂಡದಲ್ಲೂ ಸ್ಥಾನ ಪಡೆಯುವ ಗುರಿ ಹೊಂದಿರುವ ಅರ್ಜುನ್, ಮುಂಬೈನ ಸ್ಥಳೀಯ ಟೂರ್ನಿ ಕೆಸಿ ಮಹೀಂದ್ರಾ ಶೀಲ್ಡ್ ಅಂಡರ್-19 ಪಂದ್ಯದಲ್ಲಿ 6 ವಿಕೆಟ್ ಕಿತ್ತು ಗಮನ ಸಳೆದಿದ್ದಾರೆ. 

ಶುಕ್ರವಾರ ವಿಜಯ್ ಮರ್ಚೆಂಟ್ ಇಲೆವೆನ್ ತಂಡದ ಪರ ಆಡಿದ ಅರ್ಜುನ್, ವಿಜಯ್ ಮಾಂಜ್ರೇಕರ್ ಇಲೆವೆನ್ ವಿರುದ್ಧ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದರು. 2019ರ ಫೆಬ್ರವರಿಯಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯುವ ಸಾಧ್ಯತೆ ಇದೆ.