ದುಬೈ[ಡಿ.11]: ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬೌಲಿಂಗ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಶ್ರೀಲಂಕಾದ ಸ್ಪಿನ್ನರ್ ಅಕಿಲಾ ಧನಂಜಯ್ ಅವರನ್ನು ಅಮಾನತು ಮಾಡಿದೆ.

ಕಳೆದ ತಿಂಗಳು ಗಾಲೆ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಕಿಲಾ ಧನಂಜಯ್ ನಿಯಮಬಾಹಿರ ಬೌಲಿಂಗ್ ಮಾಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಧನಂಜಯ್ ಅವರಿಗೆ 14 ದಿನಗಳೊಳಗಾಗಿ ನಿಯಮಬಾಹಿರ ಬೌಲಿಂಗ್ ಕುರಿತಾಗಿ ಸ್ಪಷ್ಟನೆ ನೀಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಪಲ್ಲಿಕೆಲೆ ಟೆಸ್ಟ್’ನಲ್ಲೂ ಧನಂಜಯ್ ಲಂಕಾ ಪರ ಕಣಕ್ಕಿಳಿದಿದ್ದರು. ಇದೀಗ ಅಂತಿಮ ಟೆಸ್ಟ್ ಪಂದ್ಯವಾದ ಕೊಲಂಬೊ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ನವೆಂಬರ್ 23ರಂದು ಬ್ರಿಸ್ಬೆನ್’ನಲ್ಲಿ ಸ್ವತಂತ್ರ ಮೌಲ್ಯಮಾಪನ ಸಂಸ್ಥೆ ನಡೆಸಿದ ವಿಚಾರಣೆಯಲ್ಲಿ ಧನಂಜಯ್ 15 ಡಿಗ್ರಿಗೂ ಅಧಿಕ ಭಾಗಿ ಬೌಲಿಂಗ್ ಮಾಡಿರುವುದು ಸಾಬೀತಾಗಿರುವುದರಿಂದ ಧನಂಜಯ್ ಅವರನ್ನು ಅಮಾನತು ಮಾಡಿ ತಕ್ಷಣಕ್ಕೆ ಜಾರಿಗೆ ಬರುವಂತೆ ಐಸಿಸಿ ಆದೇಶ ಹೊರಡಿಸಿದೆ.

ಈ ನಿಷೇಧ ಆದೇಶ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಶ್ರೀಲಂಕಾದ ಹೊರಗೆ ನಡೆಯುವ ಲೀಗ್ ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿಗಳಿಗೆ ಅನ್ವಯವಾಗಲಿದೆ.