ಬೆಂಗಳೂರು(ಜು.03): ಜುಲೈ 03 ಹಲವು ಕ್ರಿಕೆಟಿಗರಿಗೆ ವಿಶೇಷ ದಿನ. ಅದರಲ್ಲೂ ಟೀಂ ಇಂಡಿಯಾ ಟರ್ಭನೇಟರ್ ಹರ್ಭಜನ್ ಸಿಂಗ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಭಾರತ ಕಂಡ ಅತ್ಯಂತ  ಯಶಸ್ವಿ ಸ್ಪಿನ್ನರ್‌ ಆಗಿ ಗುರುತಿಸಿಕೊಂಡಿರುವ ಹರ್ಭಜನ್ ಸಿಂಗ್ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹರ್ಭಜನ್ ಸಿಂಗ್ ಅಂದ ತಕ್ಷಣ ನೆನಪಾಗೋದು 2001ರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತಕ್ಕೆ 2-1 ಅಂತರದ ಸರಣಿ ಗೆಲುವಿನ ಸಿಹಿ ನೀಡಿದ್ದು ಇದೇ ಹರ್ಭಜನ್ ಸಿಂಗ್.  ಟೂರ್ನಿಯಲ್ಲಿ ಓಟ್ಟು 32 ವಿಕೆಟ್ ಕಬಳಿಸಿದ ಭಜ್ಜಿ, ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಭಾರತ ನೆಲದಲ್ಲಿ ರಿಕಿ ಪಾಂಟಿಂಗ್ ಕಳಪೆ ಪ್ರದರ್ಶನಕ್ಕೆ ಹರ್ಭಜನ್ ನಾಂದಿ ಹಾಡಿದ್ದರು.

2008ರಲ್ಲಿ ಹರ್ಭಜನ್ ಸಿಂಗ್ ವಿವಾದಕ್ಕೂ ಕಾರಣವಾದರು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ವಿರುದ್ಧದ ಜನಾಂಗೀಯ ನಿಂದನೆ ಆರೋಪ ಭಜ್ಜಿ ಮೇಲರಗಿತ್ತು. ಮಂಕಿ ಗೇಟ್ ಪ್ರಕರಣ ವಿಶ್ವಕ್ರಿಕೆಟ್‌ನಲ್ಲಿ ಭಾರಿ ಸುದ್ದಿಯಾಗಿತ್ತು. ಇನ್ನು ಐಪಿಎಲ್ ಟೂರ್ನಿಯಲ್ಲಿ ವೇಗಿ ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡೋ ಮೂಲಕ ಮತ್ತೆ ಭಾರಿ ವಿವಾದ ಸೃಷ್ಟಿಸಿದ್ದರು. 

2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹರ್ಭಜನ್ ಸಿಂಗ್, 2011ರ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಮುನ್ನಡೆಸಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಆದರೆ 2011ರ ಇಂಗ್ಲೆಂಡ್ ಪ್ರವಾಸದ ಬಳಿಕ ಹರ್ಭಜನ್ ಸಿಂಗ್ ತಂಡದಿಂದ ಹೊರಬಿದ್ದರು. 2015ರಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರೂ, ಖಾಯಂ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 

ಭಾರತದ ಪರ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಕಬಳಿಸೋ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ 3ನೇ ಭಾರತೀಯ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 236 ಏಕದಿನ ಪಂದ್ಯದಲ್ಲಿ 269 ವಿಕೆಟ್ ಉರುಳಿಸಿದ್ದರೆ, 28 ಟಿ20 ಪಂದ್ಯಗಳಲ್ಲಿ 25 ವಿಕೆಟ್ ಉರುಳಿಸಿದ್ದಾರೆ. 38ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಹರ್ಭಜನ್ ಸಿಂಗ್‌ಗೆ ಹ್ಯಾಪಿ ಬರ್ತ್‌ ಡೇ.

ಸರ್ ರಿಚರ್ಡ್ ಹ್ಯಾಡ್ಲಿ:
ಜುಲೈ 3 ಮತ್ತೊರ್ವ ಶ್ರೇಷ್ಠ ಬೌಲರ್‌ಗೂ ಜನುಮದಿನದ ಸಂಭ್ರಮ. ನ್ಯೂಜಿಲೆಂಡ್‌ನ ದಿಗ್ಗಜ ವೇಗಿ ಸರ್ ರಿಚರ್ಡ್ ಹ್ಯಾಡ್ಲಿ ಇಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಕೇವಲ 86 ಟೆಸ್ಟ್ ಪಂದ್ಯಗಳಿಂದ 431 ವಿಕೆಟ್ ಕಬಳಿಸಿದ ಸಾಧನೆಗೆ ಹ್ಯಾಡ್ಲಿ ಪಾತ್ರರಾಗಿದ್ದಾರೆ. 115 ಏಕದಿನ ಪಂದ್ಯದಿಂದ 158 ವಿಕೆಟ್ ಉರುಳಿಸಿದ್ದಾರೆ. ವಿಶ್ವ ಕಂಡ ಶ್ರೇಷ್ಠ ವೇಗದ ಬೌಲರ್ ಸರ್ ರಿಚರ್ಡ್ ಹ್ಯಾಡ್ಲಿಗೆ ಹುಟ್ಟು ಹಬ್ಬದ ಶುಭಾಷಯಗಳು.