ಬೆಂಗಳೂರು[ಜೂ.25]: ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ..

ಜೂನ್ 25, 1983: ಟೀಂ ಇಂಡಿಯಾ ಪಾಲಿಗಿಂದು ಸುವರ್ಣಾಕ್ಷದಲ್ಲಿ ಬರೆದಿಡಬೇಕಾದ ದಿನ

ಈ ದಿನವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಯಾಕೆಂದರೆ ’ಹರಿಯಾಣದ ಹರಿಕೇನ್’ ಖ್ಯಾತಿಯ ಕಪಿಲ್ ದೇವ್ ನಾಯಕತ್ವದ ಭಾರತ ತಂಡ 1983ರ ಜೂನ್ 25ರಂದು ಚೊಚ್ಚಲ ವಿಶ್ವಕಪ್ ಎತ್ತಿ ಸಂಭ್ರಮಿಸಿದ ದಿನ.

ಇಂದಿಗೆ ಸರಿಯಾಗಿ 35 ವರ್ಷದ ಹಿಂದೆ ಕಪಿಲ್ ಡೆವಿಲ್ಸ್ ಟೀಂ ಬಲಿಷ್ಠ ವೆಸ್ಟ್’ಇಂಡಿಸ್ ತಂಡವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್’ಇಂಡಿಸ್ ತಂಡವು ಕಪಿಲ್ ದೇವ್ ಪಡೆಯನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು. ಭಾರತ 54.4 ಓವರ್’ಗಳಲ್ಲಿ[* 60 ಓವರ್’ಗಳ ಪಂದ್ಯ] 183 ರನ್ ಬಾರಿಸಿ ಆಲೌಟ್ ಆಗಿತ್ತು. ಭಾರತ ಪರ ಕೆ. ಶ್ರೀಕಾಂತ್[38] ಹಾಗೂ ಮೊಯಿಂದರ್ ಅಮರ್’ನಾಥ್[26] ಹಾಗೂ ಸಂದೀಪ್ ಪಾಟೀಲ್[27] ಗರಿಷ್ಠ ರನ್ ಬಾರಿಸಿದ್ದರು.

ಮೊದಲೆರಡು ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಪ್ರಶಸ್ತಿ ಎತ್ತಿ ಹಿಡಿಯುವ ಕನಸಿನೊಂದಿಗೆ ಬ್ಯಾಟಿಂಗ್’ಗಿಳಿದ ಕ್ಲೈವ್ ಲಾಯ್ಡು ನೇತೃತ್ವದ ಕೆರಿಬಿಯನ್ ಪಡೆ ಮದನ್ ಲಾಲ್ ಹಾಗೂ ಮೊಯಿಂದರ್ ಅಮರ್’ನಾಥ್ ದಾಳಿಗೆ ತತ್ತರಿಸಿ ಕೇವಲ 140 ರನ್’ಗಳಿಗೆ ಸರ್ವಪತನ ಕಂಡಿತ್ತು. ಈ ಮೂಲಕ 43 ರನ್’ಗಳ ಜಯ ಸಾಧಿಸುವುದರೊಂದಿಗೆ ಭಾರತ ನೂತನ ಇತಿಹಾಸ ನಿರ್ಮಿಸಿತ್ತು.