ಅಬುಧಾಬಿ[ನ.01]: ಭಾರತ ಕ್ರಿಕೆಟ್‌ ತಂಡ ಬಿಡುವಿಲ್ಲದೆ ಒಂದರ ಹಿಂದೆ ಒಂದು ಸರಣಿ ಆಡುತ್ತಿದೆ. ಆದರೆ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡ ಬರೋಬ್ಬರಿ 211 ದಿನಗಳ ವಿರಾಮದ ಬಳಿಕ ಬುಧವಾರ ಮತ್ತೆ ಕಣಕ್ಕಿಳಿಯಿತು. ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಆಡುವ ಮೂಲಕ ಕ್ರಿಕೆಟ್‌ಗೆ ಮರಳಿತು. 

ಕಿವೀಸ್ ತಂಡ ಏಪ್ರಿಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿತ್ತು. ಈ ಅವಧಿಯಲ್ಲಿ ಭಾರತ ತಂಡ 8 ಟೆಸ್ಟ್‌, 13 ಏಕದಿನ, 5 ಟಿ20 ಹಾಗೂ ಐಪಿಎಲ್‌ ಆಡಿದೆ. ನ್ಯೂಜಿಲೆಂಡ್‌ನ ಕೆಲ ಆಟಗಾರರು ಮಾತ್ರ ಐಪಿಎಲ್‌ನಲ್ಲಿ ಆಡಿದ್ದರು.

ಇನ್ನು ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಎದುರು ನ್ಯೂಜಿಲೆಂಡ್ ತಂಡವು 2 ರನ್’ಗಳ ರೋಚಕ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿತ್ತು. ಇನ್ನು ಇದಕ್ಕುತ್ತರವಾಗಿ ಕಾಲಿನ್ ಮನ್ರೋ ಆಕರ್ಷಕ ಅರ್ಧಶತಕ[58] ಹಾಗೂ ರಾಸ್ ಟೇಲರ್[42*ರನ್, 26 ಎಸೆತ]  ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ 2 ರನ್’ಗಳ ವಿರೋಚಿತ ಸೋಲು ಕಂಡಿತು.