ನವದೆಹಲಿ[ಡಿ.04]: ಇಂಡಿಯನ್‌ ಪ್ರಿಮೀಯರ್‌ ಲೀಗ್‌(ಐಪಿಎಲ್‌) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಡಿ.18ರಂದು ಜೈಪುರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ. ಪ್ರತಿ ವರ್ಷ ಬೆಂಗಳೂರಲ್ಲಿ ನಡೆಯುತ್ತಿದ್ದ ಹರಾಜು ಈ ಬಾರಿ ರಾಜಸ್ಥಾನದ ರಾಜಧಾನಿಗೆ ಸ್ಥಳಾಂತರಗೊಂಡಿದೆ. ಜತೆಗೆ ಈ ಬಾರಿ 2 ದಿನಗಳ ಬದಲಿಗೆ ಒಂದೇ ದಿನ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜಿನಲ್ಲಿ ಒಟ್ಟು 70 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ 50 ಭಾರತೀಯ ಮತ್ತು 20 ವಿದೇಶಿ ಆಟಗಾರರಿದ್ದಾರೆ. 8 ಫ್ರಾಂಚೈಸಿಗಳು ಸೇರಿ ಒಟ್ಟು 145.28 ಕೋಟಿ ರುಪಾಯಿ ಹಣ ಖರ್ಚು ಮಾಡಬಹುದಾಗಿದೆ. ಕಳೆದ ತಿಂಗಳು ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದವು. ಗೌತಮ್‌ ಗಂಭೀರ್‌, ಯುವರಾಜ್‌ ಸಿಂಗ್‌ ಸೇರಿ ಅನೇಕ ತಾರಾ ಆಟಗಾರರನ್ನು ತಂಡಗಳು ಕೈಬಿಟ್ಟಿರುವ ಕಾರಣ, ಅವರೆಲ್ಲರೂ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ಆರಂಭ: ಐಪಿಎಲ್‌ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ವಾಹಿನಿಗೆ ಅನುಕೂಲವಾಗಲು ಪ್ರಧಾನ ಅವಧಿ (ಪ್ರೈಂ ಟೈಮ್‌)ನಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿರುವ ಹರಾಜು ಪ್ರಕ್ರಿಯೆ, ರಾತ್ರಿ 9ಕ್ಕೆ ಮುಕ್ತಾಯಗೊಳ್ಳಲಿದೆ. ಸಂಜೆ ನಂತರ ಹೆಚ್ಚು ವೀಕ್ಷಕರು ಟೀವಿ ನೋಡಲಿದ್ದಾರೆ ಎನ್ನುವ ಲೆಕ್ಕಾಚಾರದೊಂದಿಗೆ ಸಮಯ ಬದಲಿಸಲಾಗಿದೆ.