ಲಖನೌ[ನ.06]: ಹಾಲಿ ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಇಂದೇ ದೀಪಾವಳಿ ಆಚರಿಸಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ. ಇಂದು ಇಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯವನ್ನು ಗೆದ್ದು, ಸತತ 7ನೇ ಟಿ20 ಸರಣಿ ಗೆಲ್ಲುವ ವಿಶ್ವಾಸ ಭಾರತ ತಂಡದ್ದಾಗಿದೆ.

ವಿಂಡೀಸ್‌ ವಿರುದ್ಧ ಸತತ 4 ಟಿ20 ಪಂದ್ಯಗಳಲ್ಲಿ ಗೆಲುವು ಕಾಣದೆ ಇದ್ದ ಭಾರತ, ಕೋಲ್ಕತಾದಲ್ಲಿ ಆ ದಾಖಲೆ ಮುಂದುವರಿಯದಂತೆ ನೋಡಿಕೊಂಡಿತು. ಭಾನುವಾರದ ಗೆಲುವಿಗೂ ಮುನ್ನ ವಿಂಡೀಸ್‌ ವಿರುದ್ಧ ಕೊನೆ ಬಾರಿಗೆ ಭಾರತ ಟಿ20 ಪಂದ್ಯದಲ್ಲಿ ಗೆದ್ದಿದ್ದು ಮಾ.23, 2014ರಂದು. ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಬಳಿಕ ಮೊದಲ ಬಾರಿಗೆ ವಿಂಡೀಸ್‌ ವಿರುದ್ಧ ಟಿ20 ಗೆಲುವು ಸಾಧಿಸಿರುವ ಭಾರತ, ತನ್ನ ಲಯವನ್ನು ಮುಂದುವರಿಸಿಕೊಂಡು ಹೋಗುವ ಗುರಿ ಹೊಂದಿದೆ. ಸರಣಿ ಗೆಲುವಿನೊಂದಿಗೆ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳಲು ತಂಡ ಎದುರು ನೋಡುತ್ತಿದೆ.

ತನ್ನ ಪ್ರಮುಖ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಇಲ್ಲದೆ ಭಾರತ, ಕೋಲ್ಕತಾದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿತು. ಸುಲಭ ಗುರಿ ಬೆನ್ನಟ್ಟಲು ತಿಣುಕಾಡಿದ ಭಾರತ, 2ನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ಮೊದಲ ಪಂದ್ಯದಲ್ಲಿ ಅವರನ್ನೂ ಸೇರಿದಂತೆ ಅಗ್ರ ಕ್ರಮಾಂಕ ವೈಫಲ್ಯ ಅನುಭವಿಸಿತ್ತು. ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಮನೀಶ್‌ ಪಾಂಡೆ, ದಿನೇಶ್‌ ಕಾರ್ತಿಕ್‌ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರೂ, ಅವರಿಂದ ಮತ್ತಷ್ಟು ಉತ್ತಮ ಪ್ರದರ್ಶನ ಮೂಡಿಬರಬೇಕಿದೆ. ರಿಷಭ್‌ ಪಂತ್‌ ಜವಾಬ್ದಾರಿಯಿಂದ ಆಡಬೇಕಿದೆ.

ಕೃನಾಲ್‌ ಪಾಂಡ್ಯ ಆಲ್ರೌಂಡರ್‌ ಸ್ಥಾನದಲ್ಲಿ ಮಿಂಚಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ನಿರೀಕ್ಷೆ ಉಳಿಸಿಕೊಂಡಿದ್ದಾರೆ. ಜಸ್ಪ್ರೀತ ಬುಮ್ರಾ, ಖಲೀಲ್‌ ಅಹ್ಮದ್‌ ತಂಡದಲ್ಲಿ ಮುಂದುವರಿಯಲಿದ್ದು, ಆರೋಗ್ಯ ಸಮಸ್ಯೆಯಿಂದ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಭುವನೇಶ್ವರ್‌ ಕುಮಾರ್‌ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಈಡನ್‌ ಗಾರ್ಡನ್ಸ್‌ನಲ್ಲಿ ದುಬಾರಿಯಾಗಿದ್ದ ಉಮೇಶ್‌ ಯಾದವ್‌, ಭುವಿಗೆ ಸ್ಥಾನ ಬಿಟ್ಟುಕೊಡಲಿದ್ದಾರೆ.

ಮತ್ತೊಂದೆಡೆ ಹಿರಿಯ ಹಾಗೂ ಅನುಭವಿ ಆಟಗಾರರ ಆಗಮನದಿಂದಲೂ ವಿಂಡೀಸ್‌ ಅದೃಷ್ಟ ಬದಲಾಗಿಲ್ಲ. ವಿಶ್ವ ಚಾಂಪಿಯನ್‌ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಆದರೆ ಯುವ ವೇಗಿ ಒಶಾನೆ ಥಾಮಸ್‌ರ ಬೆಂಕಿಯುಂಡೆಯಂತಹ ಎಸೆತಗಳು, ಕೆರಿಬಿಯನ್ನರಲ್ಲಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ವಿಂಡೀಸ್‌ 140-150 ರನ್‌ ಕಲೆಹಾಕಿದ್ದರೆ, ಗೆಲ್ಲುವ ಸಾಧ್ಯತೆಗಳು ಹೆಚ್ಚಿತ್ತು. ಬೌಲರ್‌ಗಳಿಗೆ ತಕ್ಕ ಬೆಂಬಲ ನೀಡುವ ಒತ್ತಡ ಬ್ಯಾಟ್ಸ್‌ಮನ್‌ಗಳ ಮೇಲಿದ್ದರೂ, ಭಾರತದ ಬಲಿಷ್ಠ ಬೌಲಿಂಗ್‌ ಪಡೆಯನ್ನು ಮೀರಿ ನಿಲ್ಲುವುದು ಸುಲಭವಲ್ಲ ಎನ್ನುವುದು ವಿಂಡೀಸ್‌ಗೂ ಗೊತ್ತಿದೆ.

ಸಂಭವನೀಯ ತಂಡಗಳು

ಭಾರತ (ಅಂತಿಮ 12): ರೋಹಿತ್‌ ಶರ್ಮಾ(ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಜಸ್ಪ್ರೀತ್ ಬುಮ್ರಾ, ಖಲೀಲ್‌ ಅಹ್ಮದ್‌, ಯಜುವೇಂದ್ರ ಚಹಲ್‌.

ವಿಂಡೀಸ್‌: ಶೈ ಹೋಪ್‌, ದಿನೇಶ್‌ ರಾಮ್‌ದಿನ್‌, ಶಿಮ್ರೊನ್‌ ಹೆಟ್ಮೇಯರ್‌, ಡರೆನ್‌ ಬ್ರಾವೋ, ಕೀರನ್‌ ಪೊಲ್ಲಾರ್ಡ್‌, ರೋವ್ಮನ್‌ ಪೋವೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌ (ನಾಯಕ), ಫ್ಯಾಬಿಯನ್‌ ಆಲನ್‌, ಕೀಮೋ ಪೌಲ್‌, ಖಾರಿ ಪಿರ್ರೆ, ಒಶಾನೆ ಥಾಮಸ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಟ್‌

ಏಕನಾ ಕ್ರೀಡಾಂಗಣ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಇಲ್ಲಿನ ಪಿಚ್‌ ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಸಂಜೆ ಬಳಿಕ ಇಬ್ಬನಿ ಬೀಳುವುದು ಹೆಚ್ಚಾಗುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಕ್ಯುರೇಟರ್‌ಗಳ ಪ್ರಕಾರ, ಇದು ಬೌಲರ್‌ ಸ್ನೇಹಿ ಪಿಚ್‌ ಆಗಿರಲಿದ್ದು ಮೊದಲು ಬ್ಯಾಟ್‌ ಮಾಡುವ ತಂಡ 130ಕ್ಕೂ ಹೆಚ್ಚು ರನ್‌ ಕಲೆಹಾಕಿದರೆ, ಆ ಮೊತ್ತವನ್ನು ಬೆನ್ನಟ್ಟುವುದು ಕಷ್ಟ. ಹೀಗಾಗಿ ಮತ್ತೊಂದು ಕಡಿಮೆ ಮೊತ್ತದ ಪಂದ್ಯಕ್ಕೆ ಸರಣಿ ಸಾಕ್ಷಿಯಾಗಬಹುದು.

ಏಕನಾ ಕ್ರೀಡಾಂಗಣದಲ್ಲಿ ಚೊಚ್ಚಲ ಪಂದ್ಯ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಿದ ಹೆಗ್ಗಳಿಕೆಗೆ ಭಾರತದ ಮತ್ತೊಂದು ಕ್ರೀಡಾಂಗಣ ಪಾತ್ರವಾಗಲಿದೆ. ಲಖನೌನ ಏಕನಾ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಅಂ.ರಾ.ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2017ರಲ್ಲಿ ಸಿದ್ಧಗೊಂಡ ಕ್ರೀಡಾಂಗಣದಲ್ಲಿ 2017-18ರ ದುಲೀಪ್‌ ಟ್ರೋಫಿ ಫೈನಲ್‌ ಸೇರಿ 2 ಪ್ರಥಮ ದರ್ಜೆ ಪಂದ್ಯಗಳು ನಡೆದಿವೆ. 50,000 ಆಸನ ಸಾಮರ್ಥ್ಯ ಹೊಂದಿರುವ ಏಕನಾ, ಭಾರತದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ.

ಸತತ 6 ಸರಣಿ ಜಯ (ನ.2017ರಿಂದ)

ವಿರುದ್ಧ               ಅಂತರ

ನ್ಯೂಜಿಲೆಂಡ್‌        2-1

ಶ್ರೀಲಂಕಾ            3-0

ದ.ಆಫ್ರಿಕಾ            2-1

ತ್ರಿಕೋನ ಸರಣಿ   

ಐರ್ಲೆಂಡ್‌            2-0

ಇಂಗ್ಲೆಂಡ್‌            2-1