ಲಖನೌ[ನ.06]: ಭಾರತ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಇಂದು ಏಕನಾ ಅಂತರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯ ವಹಿಸಲು ಸಜ್ಜಾಗಿದ್ದು, ಪಂದ್ಯ ಆರಂಭಕ್ಕೇ ಕೆಲವು ಗಂಟೆಗಳು ಬಾಕಿಯಿರುವಾಗಲೇ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾಗಿದೆ. 

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರ ಅಖಿಲೇಶ್ ಯಾದವ್ ಅವರ ಕನಸಿನ ಕ್ರೀಡಾಂಗಣ ಇದಾಗಿದ್ದು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ’ ಎಂದು ಹೆಸರಿಡಲಾಗಿದೆ. 

ಉತ್ತರಪ್ರದೇಶದ ರಾಜಧಾನಿಯಲ್ಲಿ ಭವ್ಯ ಮೈದಾನ ನಿರ್ಮಿಸಲಾಗಿದ್ದು, ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಕ್ಕೆ ವೇದಿಕೆ ವಹಿಸಲಿದೆ. ಲಖನೌನ ಏಕನಾ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಅಂ.ರಾ.ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2017ರಲ್ಲಿ ಸಿದ್ಧಗೊಂಡ ಕ್ರೀಡಾಂಗಣದಲ್ಲಿ 2017-18ರ ದುಲೀಪ್‌ ಟ್ರೋಫಿ ಫೈನಲ್‌ ಸೇರಿ 2 ಪ್ರಥಮ ದರ್ಜೆ ಪಂದ್ಯಗಳು ನಡೆದಿವೆ. 50,000 ಆಸನ ಸಾಮರ್ಥ್ಯ ಹೊಂದಿರುವ ಏಕನಾ, ಭಾರತದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ.