ಬೆಂಗಳೂರು[ನ.09]: ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ ಟಿ20 ಸರಣಿ ಗೆದ್ದು ಬೀಗುತ್ತಿರುವ ಭಾರತ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಕುಲ್ದೀಪ್ ಯಾದವ್’ಗೆ ರೆಸ್ಟ್ ನೀಡಲಾಗಿದೆ. ನವೆಂಬರ್ 11ರಂದು ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಅಂತಿಮ ಟಿ20 ಪಂದ್ಯ ನಡೆಯಲಿದೆ.

3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಕೊಲ್ಕತ್ತಾ ಮತ್ತು ಲಖ್ನೋದಲ್ಲಿ ಕ್ರಮವಾಗಿ 5 ವಿಕೆಟ್ ಮತ್ತು 71 ರನ್’ಗಳಿಂದ ಜಯಭೇರಿ ಬಾರಿಸಿ 2-0 ಅಂತರದಲ್ಲಿ ಸರಣಿ ಜಯಿಸಿದೆ. ತಂಡಕ್ಕೆ ಸಿದ್ದಾರ್ಥ್ ಕೌಲ್ ಸೇರ್ಪಡೆಯಾಗಿದ್ದಾರೆ. ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿರುವ ಶಹಬಾಜ್ ನದೀಮ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಗಾಯದ ಸಮಸ್ಯೆ ಬಳಿಕ ತಂಡ ಕೂಡಿಕೊಂಡಿರುವ ವಾಷಿಂಗ್ಟನ್ ಸುಂದರ್ ತವರು ಮೈದಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಅಂತಿಮ ಟಿ20 ಪಂದ್ಯಕ್ಕೆ ಹೀಗಿದೆ ಟೀಂ ಇಂಡಿಯಾ 
ರೋಹಿತ್ ಶರ್ಮಾ[ನಾಯಕ], ಶಿಖರ್ ಧವನ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಶ್ರೇಯಸ್ ಅಯ್ಯರ್, ರಿಶಭ್ ಪಂತ್, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ಶಹಜಾದ್ ನದೀಮ್, ಸಿದ್ದಾರ್ಥ್ ಕೌಲ್.