ಪುಣೆ[ಅ.27]: ಎರಡನೇ ಏಕದಿನ ಪಂದ್ಯವನ್ನು ಟೈ ಮಾಡಿಕೊಂಡು ಭಾರತಕ್ಕೆ ಮತ್ತೊಮ್ಮೆ ತನ್ನ ಸಮಸ್ಯೆಗಳ ಪರಿಚಯ ಮಾಡಿಸಿರುವ ವಿಂಡೀಸ್, ಸರಣಿಗೆ ಜೀವ ತುಂಬಿದ್ದಾರೆ. ಆದರೂ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಹೊಂದಿರುವ ಭಾರತ, ಇಂದು ಇಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಮುನ್ನಡೆಯನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ. 

ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣ, ಮುಂಚೂಣಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅಂತಿಮ 3 ಪಂದ್ಯಗಳಿಗೆ ಲಭ್ಯರಾಗಿರುವುದು. ಗುವಾಹಟಿಯಲ್ಲಿ ನಡೆದ ಮೊದಲ ಏಕದಿನದಲ್ಲಿ 8 ವಿಕೆಟ್ ಜಯ ಸಾಧಿಸಿ ಮೆರೆದಾಡಿದ್ದ ಭಾರತ, ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೂ, ಬೌಲಿಂಗ್‌ನಲ್ಲಿ  ಎಡವಿತ್ತು. ಭುವನೇಶ್ವರ್ ಹಾಗೂ ಬುಮ್ರಾ ಅನುಪಸ್ಥಿತಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಕಾಡಿದ್ದು, ಎರಡೂ ಪಂದ್ಯಗಳಲ್ಲಿ ಭಾರತ 320ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ. ಉಮೇಶ್ ಯಾದವ್ ಹಾಗೂ ಮೊಹಮದ್ ಶಮಿಗೆ ಹೋಲಿಸಿದರೆ, ಸೀಮಿತ ಓವರ್ ಮಾದರಿಯಲ್ಲಿ ಭುವಿ ಹಾಗೂ ಬುಮ್ರಾ ಹೆಚ್ಚು ಪರಿಣಾಮಕಾರಿ. ಅದರಲ್ಲೂ ಆರಂಭಿಕ ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಇವರಿಬ್ಬರ ಪಾತ್ರ ಪಂದ್ಯದ ಗತಿ ಬದಲಿಸಬಲ್ಲದು. ಮುಂದಿನ ವರ್ಷ ಏಕದಿನ ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಕೇವಲ 16 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ತಂಡದ ಸಂಯೋಜನೆಯನ್ನು ಸರಿಪಡಿಸಿಕೊಳ್ಳುವ ಒತ್ತಡವಿದೆ.

ದುರ್ಬಲ ಮಧ್ಯಮ ಕ್ರಮಾಂಕ ಹಾಗೂ ಅಸ್ಥಿರ ಕೆಳ ಮಧ್ಯಮ ಕ್ರಮಾಂಕದ ಸಮಸ್ಯೆಗೂ ಭಾರತ ಉತ್ತರ ಹುಡುಕಿಕೊಳ್ಳಬೇಕಿದೆ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಸ್ಥಿರತೆ ಕಂಡುಕೊಳ್ಳದಿದ್ದರೂ, ಇಬ್ಬರಲ್ಲಿ ಒಬ್ಬರು ಹೆಚ್ಚೂ ಕಡಿಮೆ ಪ್ರತಿ ಪಂದ್ಯದಲ್ಲೂ ತಂಡಕ್ಕೆ ದೊಡ್ಡ ಮೊತ್ತದ ನೆರವು ನೀಡುತ್ತಾ ಬಂದಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯ ರನ್ ಅಬ್ಬರ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ತಂಡ 4ನೇ ಕ್ರಮಾಂಕವನ್ನು ಅಂಬಟಿ ರಾಯುಡುಗೆ ಮೀಸಲಿಟ್ಟಿದೆ. ರಾಯುಡು ಕಳೆದ ಪಂದ್ಯದಲ್ಲಿ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಆದರೆ 5, 6 ಹಾಗೂ 7ನೇ ಕ್ರಮಾಂಕದ ಕಥೆ ಏನು?. ಈ ಪ್ರಶ್ನೆಗೆ ಭಾರತ ತಂಡದ ಆಡಳಿತದ ಬಳಿ ಸ್ಪಷ್ಟ ಉತ್ತರವಿಲ್ಲ. ಧೋನಿ ರನ್ ಕಲೆಹಾಕಲು ಪರದಾಡುತ್ತಿದ್ದಾರೆ. ರಿಶಭ್ ಪಂತ್ ಮೇಲೆ ಏಕಾಏಕಿ ಒತ್ತಡ ಹೇರಲಾಗುತ್ತಿದೆ. ರವೀಂದ್ರ ಜಡೇಜಾ ಇವತ್ತಿನ ವರೆಗೂ ಒಬ್ಬ ಬ್ಯಾಟ್ಸ್‌ಮನ್ ಆಗಿ ತಂಡದ ನಂಬಿಕೆ ಉಳಿಸಿಕೊಂಡಿಲ್ಲ.

ಭುವನೇಶ್ವರ್,ಬುಮ್ರಾ ವಾಪಸ್ ಆಗಿರುವುದರಿಂದ ಹೊಸ ಚೆಂಡನ್ನು ಈ ಇಬ್ಬರು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯಾಗಿ ಉಮೇಶ್ ಯಾದವ್ ಆಡುವ ಸಾಧ್ಯತೆ ಇದೆ. ಒಂದೊಮ್ಮೆ ಮೂವರು ಸ್ಪಿನ್ನರ್‌ಗಳನ್ನು ಆಡಿಸಲು ನಿರ್ಧರಿಸದರೆ ಉಮೇಶ್ ಹೊರಗುಳಿಯಲಿದ್ದಾರೆ. 2ನೇ ಪಂದ್ಯದಲ್ಲಿ ಇಬ್ಬನಿ ಬಿದ್ದು ಚೆಂಡು ಒದ್ದೆಯಾದ ಕಾರಣ, ಸ್ಪಿನ್ನರ್’ಗಳಾದ ಕುಲ್ದೀಪ್ ಹಾಗೂ ಚಹಲ್ ಚೆಂಡಿನ ಮೇಲೆ ಹಿಡಿತ ಸಾಧಿಸಲು ವಿಫಲರಾದರು. ಈ ಅಂಶ ನಾಯಕ ಕೊಹ್ಲಿಯನ್ನು ಚಿಂತೆಗೀಡು ಮಾಡಿದೆ. ಕುಲ್ದೀಪ್ ದುಬಾರಿಯಾಗುತ್ತಿದ್ದರೂ ವಿಕೆಟ್ ಕೀಳುತ್ತಿದ್ದಾರೆ, ಆದರೆ ಚೆಹಲ್ ದುಬಾರಿಯಾಗುವುದರ ಜತೆ ವಿಕೆಟ್ ಕೀಳುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ. ರವೀಂದ್ರ ಜಡೇಜಾ ಎಚ್ಚೆತ್ತುಕೊಂಡು ಉತ್ತಮ ಪ್ರದರ್ಶನ ತೋರಬೇಕಿದೆ. ಇಲ್ಲವಾದಲ್ಲಿ, ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಅವರನ್ನು ತಂಡದಿಂದ ಕೈಬಿಟ್ಟರೆ ಅಚ್ಚರಿಯಿಲ್ಲ. 

ವಿಂಡೀಸ್‌ಗೆ ಯುವಕರ ಬಲ: ವೆಸ್ಟ್‌ಇಂಡೀಸ್‌ಗೆ ಯುವ ಆಟಗಾರ ಶಿಮ್ರೊನ್ ಹೆಟ್ಮೇಯರ್ ಬಲ ತುಂಬಿದ್ದಾರೆ. ಮೊದಲ ಪಂದ್ಯದಲ್ಲಿ 106 ರನ್ ಗಳಿಸಿದ್ದ ಅವರು, 2ನೇ ಪಂದ್ಯದಲ್ಲಿ 94 ರನ್
ಸಿಡಿಸಿದ್ದರು. ವಿಕೆಟ್ ಕೀಪರ್ ಶಾಯ್ ಹೋಪ್ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ಆದರೆ ಹಿರಿಯ ಆಟಗಾರರಿಂದ ನಿರೀಕ್ಷಿತ ಕೊಡುಗೆ ದೊರೆಯುತ್ತಿಲ್ಲ. ಜತೆಗೆ ಬೌಲಿಂಗ್ ವಿಭಾಗ ಸಹ ದುರ್ಬಲವಾಗಿದೆ. ಆದರೂ, ಭಾರತೀಯರಿಗೆ ತಕ್ಕಮಟ್ಟಿಗಿನ ಪ್ರತಿರೋಧ ನೀಡಲು ತಂಡ ಕಾಯುತ್ತಿದೆ.

ಸಂಭವನೀಯ ತಂಡಗಳು
ಭಾರತ
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ಅಂಬಟಿ ರಾಯುಡು, ಧೋನಿ, ರಿಶಭ್ ಪಂತ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚೆಹಲ್. 
ವಿಂಡೀಸ್
ಕೀರನ್ ಪೋವೆಲ್, ಹೇಮ್‌ರಾಜ್ ಚಂದ್ರಪಾಲ್, ಶಾಯ್ ಹೋಪ್, ಮರ್ಲಾನ್ ಸ್ಯಾಮುಯಲ್ಸ್, ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್, ಜೇಸನ್ ಹೋಲ್ಡರ್ (ನಾಯಕ), ಆಶ್ಲೆ ನರ್ಸ್,
ಕೀಮಾರ್ ರೋಚ್, ಬಿಶೂ, ಮೆಕ್ಕಾಯ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1