ವೆಲ್ಲಿಂಗ್ಟನ್[ಫೆ.03]: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. 5ನೇ ಪಂದ್ಯದಲ್ಲಿ 35 ರನ್’ಗಳ ಅಂತರದಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದ ಭಾರತ 4-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು.

ಕಿವೀಸ್ ವಿರುದ್ಧ ಭಾರತಕ್ಕೆ 35 ರನ್ ಗೆಲುವು- 4-1 ಅಂತರದಲ್ಲಿ ಸರಣಿ ಕೈವಶ

ಒಂದು ಹಂತದಲ್ಲಿ 18 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತಕ್ಕೆ ಅಂಬಟಿ ರಾಯುಡು[90], ವಿಜಯ್ ಶಂಕರ್[45] ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 250ರ ಸಮೀಪ ಕೊಂಡ್ಯೊಯ್ದರು. 

ಕಿವೀಸ್ ಎದುರು ಅಬ್ಬರಿಸಿದ ಪಾಂಡ್ಯ: ಜೈ ಹೋ ಎಂದ ಟ್ವಿಟರಿಗರು..!

ಎಬಿಡಿ ದಾಖಲೆ ಸರಿಗಟ್ಟಿದ ಪಾಂಡ್ಯ:
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ಪಾಂಡ್ಯ ಯಶಸ್ವಿಯಾಗಿದ್ದಾರೆ. ಹರಿಣಗಳ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಎಬಿಡಿ, ಕಳೆದ 2 ದಶಕಗಳಿಂದೀಚೆಗೆ 4 ಬಾರಿ ಏಕದಿನ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಇದೀಗ ಟೋಡ್ ಆ್ಯಶ್ಲೆ ಬೌಲಿಂಗ್’ನಲ್ಲಿ ಸತತ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಎಬಿಡಿ ದಾಖಲೆ ಸರಿಗಟ್ಟಿದ್ದಾರೆ. ಈ ಮೊದಲು ಹಾರ್ದಿಕ್ ಪಾಂಡ್ಯ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಇಮಾದ್ ವಾಸೀಂ ಹಾಗೂ ಶಾಬಾದ್ ಖಾನ್ ಬೌಲಿಂಗ್’ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಇನ್ನು 2017ರಲ್ಲೇ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆ್ಯಡಂ ಜಂಪಾ ಬೌಲಿಂಗ್’ನಲ್ಲೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು.