ಸಿಡ್ನಿ[ಜ.06]: ಆಸ್ಟ್ರೇಲಿಯಾ ಪಡೆಯನ್ನು ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 300 ರನ್’ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಆತಿಥೇಯರ ಮೇಲೆ ಫಾಲೋ ಆನ್ ಹೇರಿದೆ. ಭಾರತ ಕುಲ್ದೀಪ್ ಯಾದವ್ 5 ಮೊಹಮ್ಮದ್ ಶಮಿ , ಜಡೇಜಾ ತಲಾ 2 ಹಾಗೂ ಬುಮ್ರಾ 1 ವಿಕೆಟ್ ಪಡೆದರು.

1988ರ ಬಳಿಕ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ತವರಿನಲ್ಲಿ ಫಾಲೋ ಆನ್ ಬಲೆಗೆ ಸಿಲುಕಿದೆ. ಟೀಂ ಇಂಡಿಯಾ ಕೂಡಾ ಆಸಿಸ್ ನೆಲದಲ್ಲಿ 1986ರ ಬಳಿಕ ಮೊದಲ ಬಾರಿಗೆ ಕಾಂಗರೂಗಳ ಮೇಲೆ ಫಾಲೋ ಆನ್ ಹೇರಿದೆ. 1986ರ ಜನವರಿ 06ರಂದೇ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಫಾಲೋ ಆನ್ ಹೇರಿತ್ತು. ಆ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.

ಮಳೆಯಿಂದ ಮೂರನೇ ದಿನ ಇನ್ನೂ 15 ಓವರ್ ಬಾಕಿ ಇರುವಾಗಲೇ ಪಂದ್ಯ ಅಂತ್ಯಗೊಂಡಿತ್ತು. ನಾಲ್ಕನೇ ದಿನವೂ ಮಳೆ ಕೆಲಗಂಟೆಗಳ ಕಾಲ ಪಂದ್ಯಕ್ಕೆ ಅಡ್ಡಿಪಡಿಸಿತು. ಆದರೆ ಮೂರನೇ ದಿನ ನೆಲಕಚ್ಚಿ ಆಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ಅವರಿಗೆ ಶಮಿ ತಾವೆಸೆದ ಮೊದಲ ಓವರ್’ನಲ್ಲೇ ಪೆವಿಲಿಯನ್ ಹಾದಿ ತೋರಿಸಿದರು. ಆಬಳಿಕ ಹ್ಯಾಂಡ್ಸ್’ಕಬ್ ಕೆಲ ಆಕರ್ಷಕ ಬೌಂಡರಿಗಳ ಮೂಲಕ ರನ್ ಕಲೆಹಾಕಿದರಾದರೂ ಬುಮ್ರಾ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಹ್ಯಾಂಡ್ಸ್’ಕಂಬ್ ಔಟ್ ಆಗುವ ಮುನ್ನ 111 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 37ರನ್ ಬಾರಿಸಿದರು. ನೇಥನ್ ಲಯನ್ಸ್ ಶೂನ್ಯ ಸುತ್ತಿ ಕುಲ್ದೀಪ್’ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹ್ಯಾಜಲ್’ವುಡ್-ಸ್ಟಾರ್ಕ್ ಜೋಡಿ 42 ರನ್’ಗಳ ಜತೆಯಾಟವಾಡಿತಾದರು ತಂಡವನ್ನು ಫಾಲೋ ಆನ್’ನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹ್ಯಾಜಲ್’ವುಡ್ 21 ರನ್ ಬಾರಿಸಿ ಕುಲ್ದೀಪ್’ಗೆ 5ನೇ ಬಲಿಯಾದರು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ ಭರ್ಜರಿ ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 622 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದೀಗ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ 322 ರನ್’ಗಳ ಹಿನ್ನಡೆ ಅನುಭವಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1 ರ ಮುನ್ನಡೆ ಸಾಧಿಸಿದ್ದು, ಬಹುತೇಕ ಆಸಿಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಹೊಸ್ತಿಲಿನಲ್ಲಿದೆ.