ವೈಜಾಗ್[ಫೆ.24]: ಕನ್ನಡಿಗ ಕೆ.ಎಲ್ ರಾಹುಲ್ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 127 ರನ್’ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ[5] ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ಬಳಿಕ ಜತೆಯಾದ ರಾಹುಲ್-ಕೊಹ್ಲಿ ಜೋಡಿ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್’ಗೆ ಈ ಜೋಡಿ 55 ರನ್’ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ನೆರವಾದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ [24] ಆಡಂ ಜಂಪಾ ಬೌಲಿಂಗ್’ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಕೆ.ಎಲ್ ರಾಹುಲ್ 36 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್’ಗಳ ನೆರವಿನಿಂದ 50 ರನ್ ಬಾರಿಸಿ ಕೌಲ್ಟಲ್’ನೀಲ್’ಗೆ ವಿಕೆಟ್ ಒಪ್ಪಿಸಿದರು.

ಡಿಢೀರ್ ಕುಸಿದ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 10 ಓವರ್ ಮುಕ್ತಾಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 80 ರನ್ ಬಾರಿಸಿತ್ತು. ಆದರೆ ಪಂತ್[3] ಇಲ್ಲದ ರನ್ ಕದಿಯಲು ಹೋಗಿ ವಿಕೆಟ್ ಒಪ್ಪಿಸಿದರು. ದಿನೇಶ್ ಕಾರ್ತಿಕ್ ಹಾಗೂ ಕೃನಾಲ್ ಪಾಂಡ್ಯ ತಲಾ ಒಂದೊಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. 15 ಓವರ್ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 100 ರನ್ ಗಡಿ ಮುಟ್ಟಿತು. ಧೋನಿ ಕೊನೆಯಲ್ಲಿ ಅಲ್ಪ ಪ್ರತಿರೋಧ ತೋರಿದರಾದರೂ ಮತ್ತೊಂದು ತುದಿಯಿಂದ ಅವರಿಗೆ ಸಹಕಾರ ದೊರೆಯಲಿಲ್ಲ. ಧೋನಿ 37 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಸಹಿತ 29 ರನ್ ಬಾರಿಸಿ ಅಜೇಯರಾಗುಳಿದರು.

ಆಸ್ಟ್ರೇಲಿಯಾ ಪರ ನಾಥನ್ ಕೌಲ್ಟರ್’ನೀಲ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಕಮ್ಮಿನ್ಸ್, ಜಂಪಾ ಹಾಗೂ ಬೆಹ್ರನ್’ಡ್ರಾಪ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 126/7
ಕೆ.ಎಲ್ ರಾಹುಲ್: 50
ನಾಥನ್ ಕೌಲ್ಟರ್’ನೀಲ್: 26/3
[* ವಿವರ ಅಪೂರ್ಣ]