ದುಬೈ[ನ.02]: ನೂತನವಾಗಿ ಬಿಡುಗಡೆಯಾದ ಐಸಿಸಿ ಟೆಸ್ಟ್‌ ತಂಡಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನ ಉಳಿಸಿಕೊಂಡಿದೆ. ಅದೇರೀತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಬ್ಯಾಟ್ಸ್’ಮನ್’ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. 

ಸದ್ಯ ಭಾರತ 116 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕಿಂತ 10 ಅಂಕ ಮುಂದಿದೆ. ಇನ್ನು ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆ ನಂತರದ ಸ್ಥಾನದಲ್ಲಿವೆ. ಭಾರತ ಎದುರಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ 76 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

ಇದನ್ನು ಓದಿ: ಟಿ20 ರ‍್ಯಾಂಕಿಂಗ್‌ ಪ್ರಕಟ-ಟಾಪ್ 10 ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

ಇದೇ ವೇಳೆ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ 935 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ಗಿಂತ 25 ಅಂಕ ಮುನ್ನಡೆ ಹೊಂದಿದ್ದಾರೆ. ಚೇತೇಶ್ವರ್‌ ಪೂಜಾರ 6ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಬ್ಯಾಟ್ಸ್’ಗಳ ಪಟ್ಟಿಯಲ್ಲಿ ಮೊದಲ 9 ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ದಕ್ಷಿಣ ಆಫ್ರಿಕಾದ ಯುವ ಪ್ರತಿಭೆ ಏಯ್ಡನ್ ಮಾರ್ಕ್’ರಮ್ 10ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಬೌಲರ್’ಗಳ ಶ್ರೇಯಾಂಕದಲ್ಲಿ ಜೇಮ್ಸ್ ಆ್ಯಂಡರ್’ಸನ್ ಮೊದಲ ಸ್ಥಾನದಲ್ಲಿದ್ದರೆ, ಕಗಿಸೋ ರಬಾಡ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ ಹೊಸ ಪ್ರತಿಭೆ ಮೊಹಮ್ಮದ್ ಅಬ್ಬಾಸ್ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದರೆ, ಜಡೇಜಾ 5 ಹಾಗೂ ಅಶ್ವಿನ್ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.