ಶಿವ ಪ್ರಯೋಗವನ್ನು ಅಂಪೈರ್‌ ವಿನೋದ್‌ ಶೇಷನ್‌, ಡೆಡ್‌ ಬಾಲ್‌ ಎಂದು ಘೋಷಿಸುತ್ತಿದ್ದಂತೆ ಬೌಲರ್‌ ಹಾಗೂ ಉ.ಪ್ರದೇಶದ ಕ್ಷೇತ್ರರಕ್ಷಕರು ಅಂಪೈರ್‌ ಜತೆ ವಾದ ನಡೆಸಿದ್ದಾರೆ. ಲೆಗ್‌ ಅಂಪೈರ್‌ ಜತೆ ಚರ್ಚೆ ನಡೆಸಿದ ವಿನೋದ್‌, ಮತ್ತೆ ಈ ರೀತಿ ಬೌಲಿಂಗ್‌ ಮಾಡಿದರೆ ಡೆಡ್‌ ಬಾಲ್‌ ಎಂದೇ ಘೋಷಿಸುವುದಾಗಿ ಎಚ್ಚರಿಸಿದರು.

ನವದೆಹಲಿ[ನ.09]: ಕ್ರಿಕೆಟ್‌ ಜಗತ್ತು ಹೊಸ ಶೈಲಿಯ ಬೌಲಿಂಗ್‌ ಅನ್ನು ನೋಡುವ ಅವಕಾಶದಿಂದ ವಂಚಿತಗೊಳ್ಳಬಹುದು. ಕಾರಣ, ಚೆಂಡನ್ನು ಎಸೆಯುವ ಮೊದಲು 360 ಡಿಗ್ರಿ ತಿರುಗಿದ್ದಕ್ಕೆ ಅಂಪೈರ್‌ ಡೆಡ್‌ ಬಾಲ್‌ ಘೋಷಿಸಿ, ಪ್ರಯೋಗಕ್ಕೆ ಕತ್ತರಿ ಹಾಕಿದ್ದಾರೆ. ಇಂತಹ ಅಪರೂಪದ ಪ್ರಸಂಗ ನಡೆದಿರುವುದು ಬಂಗಾಳ ಹಾಗೂ ಉತ್ತರ ಪ್ರದೇಶ ನಡುವಿನ ಸಿ.ಕೆ.ನಾಯ್ಡು ಅಂಡರ್‌-23 ಪಂದ್ಯದಲ್ಲಿ. ರಿವರ್ಸ್‌ ಸ್ವೀಪ್‌, ಸ್ವಿಚ್‌ ಹಿಟ್‌ನಂತೆ ‘ಸ್ವಿಚ್‌ ಬೌಲಿಂಗ್‌’ ಮಾಡಿ ಗಮನ ಸೆಳೆದಿರುವುದು ಉ.ಪ್ರದೇಶದ ಎಡಗೈ ಸ್ಪಿನ್ನರ್‌ ಶಿವ ಸಿಂಗ್‌.

Scroll to load tweet…

ಶಿವ ಪ್ರಯೋಗವನ್ನು ಅಂಪೈರ್‌ ವಿನೋದ್‌ ಶೇಷನ್‌, ಡೆಡ್‌ ಬಾಲ್‌ ಎಂದು ಘೋಷಿಸುತ್ತಿದ್ದಂತೆ ಬೌಲರ್‌ ಹಾಗೂ ಉ.ಪ್ರದೇಶದ ಕ್ಷೇತ್ರರಕ್ಷಕರು ಅಂಪೈರ್‌ ಜತೆ ವಾದ ನಡೆಸಿದ್ದಾರೆ. ಲೆಗ್‌ ಅಂಪೈರ್‌ ಜತೆ ಚರ್ಚೆ ನಡೆಸಿದ ವಿನೋದ್‌, ಮತ್ತೆ ಈ ರೀತಿ ಬೌಲಿಂಗ್‌ ಮಾಡಿದರೆ ಡೆಡ್‌ ಬಾಲ್‌ ಎಂದೇ ಘೋಷಿಸುವುದಾಗಿ ಎಚ್ಚರಿಸಿದರು.

ಈ ಪ್ರಸಂಗದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌, ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದೆ. ಭಾರತದ ಮಾಜಿ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ ಸಹ ಟ್ವೀಟ್‌ ಮಾಡಿದ್ದಾರೆ. ವಿಡಿಯೋ ಭಾರೀ ವೈರಲ್‌ ಆಗಿದ್ದು, ನಿಯಮದ ಪ್ರಕಾರ ಈ ಶೈಲಿಗೆ ಅನುಮತಿ ಇದೆಯೇ ಎನ್ನುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಇದೇ ಮೊದಲಲ್ಲ: ಈ ಶೈಲಿಯಲ್ಲಿ ಬೌಲಿಂಗ್‌ ಮಾಡಿರುವುದು ಇದೇ ಮೊದಲಲ್ಲ ಎಂದು ಶಿವ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ‘ಕಳೆದ ತಿಂಗಳು ಕೇರಳ ವಿರುದ್ಧ ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲೂ ಈ ಪ್ರಯೋಗ ನಡೆಸಿದ್ದೆ, ಆದರೆ ಅಂಪೈರ್‌ ಡೆಡ್‌ ಬಾಲ್‌ ಘೋಷಿಸಲಿಲ್ಲ’ ಎಂದು ಶಿವ ಹೇಳಿದ್ದಾರೆ. ತಮ್ಮ ಬೌಲಿಂಗ್‌ ಶೈಲಿ ಸರಿಯಾಗಿದೆ ಎಂದಿರುವ ಅವರು, ‘ಬ್ಯಾಟ್ಸ್‌ಮನ್‌ಗಳಿಗೆ ಸ್ವಿಚ್‌ ಹಿಟ್‌, ರಿವರ್ಸ್‌ ಸ್ವೀಪ್‌ಗೆ ಅವಕಾಶವಿದೆ. ಬೌಲಿಂಗ್‌ನಲ್ಲೂ ಕೆಲ ಅಚ್ಚರಿಯ ಶೈಲಿಗಳಿಗೆ ಅನುಮತಿ ನೀಡಬೇಕು. ಬ್ಯಾಟ್ಸ್‌ಮನ್‌ಗೆ ಸವಾಲು ಹಾಕಲು ಇದೊಂದು ಮಾದರಿಯಷ್ಟೇ’ ಎಂದಿದ್ದಾರೆ.

ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಅಂ.ರಾ.ಅಂಪೈರ್‌ ಸೈಮನ್‌ ಟೌಫಲ್‌, ‘360 ಡಿಗ್ರಿ ಬೌಲಿಂಗ್‌ ಹಾಗೂ ರಿವರ್ಸ್‌ ಇಲ್ಲವೇ ಸ್ವಿಚ್‌ ಹಿಟ್‌ ನಡುವೆ ಉದ್ದೇಶದ ವ್ಯತ್ಯಾಸವಿದೆ. ಡೆಡ್‌ ಬಾಲ್‌ ಎಂದು ಘೋಷಿಸುವುದು ಅಂಪೈರ್‌ಗೆ ಬಿಟ್ಟ ವಿಚಾರ. ಆದರೆ ಬ್ಯಾಟ್ಸ್‌ಮನ್‌ಗೆ ತೊಂದರೆ ಮಾಡುವ, ಏಕಾಗ್ರತೆ ಹಾಳು ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದರೆ ಅದು ತಪ್ಪು. ಇದು ಬೌಲರ್‌ನ ಸಹಜ ಬೌಲಿಂಗ್‌ ಶೈಲಿಯಾಗಿದ್ದರೆ ಆಗ ಅಂತಹ ಶೈಲಿಯನ್ನು ಪರಿಗಣಿಸಬಹುದೇನೋ’ ಎಂದಿದ್ದಾರೆ.

ಶಿವ ಪ್ರಯೋಗಗಳು ಒಂದೆರಡಲ್ಲ!

ಈ ಹಿಂದೆ ಶಿವ ಸಿಂಗ್‌ ಬೌಲಿಂಗನ್ನು ಎದುರಿಸಿರುವ ಬೆಂಗಾಲ್‌ ತಂಡದ ಆಟಗಾರನೊಬ್ಬ ಪ್ರತಿಕ್ರಿಯಿಸಿದ್ದು, ಶಿವ ಸಿಂಗ್‌ರ ವಿಭಿನ್ನ ಪ್ರಯೋಗಗಳನ್ನು ವಿವರಿಸಿದ್ದಾರೆ. ‘ಶಿವ ತಮ್ಮ ಎಡಗೈ ಬಲದಿಂದ ಬೌನ್ಸರ್‌ ಹಾಕಬಲ್ಲರು. ಕೆಲವೊಮ್ಮೆ ತಾವು ಬೌಲ್‌ ಮಾಡಲು ಬಳಸದ ತೋಳನ್ನು ಮೇಲೆತ್ತದೆಯೇ ಚೆಂಡನ್ನು ಹಾಕುವ ಕಲೆ ಅವರಿಗಿದೆ. ಇನ್ನೂ ಕೆಲವು ಬಾರಿ ಸೋಮಾರಿಯಂತೆ ಹೆಜ್ಜೆ ಹಾಕುತ್ತಾ ಬಂದು ಚೆಂಡನ್ನು ಎಸೆಯುತ್ತಾರೆ. ಆದರೆ ಎಸೆತಗಳ ಮೇಲೆ ಅವರಿಗೆ ಹಿಡಿತವಿದೆ. ಅವರ 360 ಡಿಗ್ರಿ ಬೌಲಿಂಗ್‌ ಶೈಲಿಯಿಂದ ನನಗೆ ಯಾವತ್ತೂ ಗಮನ ಭಂಗವಾಗಿಲ್ಲ’ ಎಂದು ಹೇಳಿದ್ದಾರೆ.

ನಿಯಮ ಏನು ಹೇಳುತ್ತದೆ?

ಐಸಿಸಿಯ 20.4.2.7 ನಿಯಮದ ಪ್ರಕಾರ ಬೌಲರ್‌ ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್‌ನ ಗಮನ ಭಂಗ ಯತ್ನ ನಡೆಸಿರಬೇಕು ಇಲ್ಲವೇ ಬ್ಯಾಟ್ಸ್‌ಮನ್‌ಗೆ ತೊಂದರೆ ಉಂಟು ಮಾಡುತ್ತಿರಬೇಕು. ಆಗ ಅಂಪೈರ್‌ ಬೌಲರ್‌ನ ಎಸೆತವನ್ನು ಡೆಡ್‌ ಬಾಲ್‌ ಎಂದು ಘೋಷಿಸಬಹುದು.