ಅಡಿಲೇಡ್[ಡಿ.08]: ಕೆ.ಎಲ್ ರಾಹುಲ್[44] ಅರ್ಧಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್’ನ ಮೂರನೇ ದಿನದ ಚಹಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ್ದು ಒಟ್ಟಾರೆ 101 ರನ್’ಗಳ ಮುನ್ನಡೆ ಸಾಧಿಸಿದೆ.

ಮೂರನೇ ದಿನದ ಆರಂಭದಲ್ಲೇ ಆಸಿಸ್ ಪಡೆಯನ್ನು ಆಲೌಟ್ ಮಾಡಿದ ಭಾರತ, ಎರಡನೇ ಇನ್ನಿಂಗ್ಸ್’ನಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ವಿಕೆಟ್’ಗೆ ಮುರುಳಿ ವಿಜಯ್-ಕೆ.ಎಲ್ ರಾಹುಲ್ ಜೋಡಿ ಅರ್ಧಶತಕದ[63] ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಮುರುಳಿ ವಿಜಯ್ 18 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್’ನಲ್ಲಿ ಪೀಟರ್ ಹ್ಯಾಂಡ್ಸ್’ಕಂಬ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಕಳಪೆ ಫಾರ್ಮ್’ನಿಂದ ಬಳಲುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಕೆಲವು ಆಕರ್ಷಕ ಬೌಂಡರಿ ಹಾಗೂ ಒಂದು ಮನಮೋಹಕ ಸಿಕ್ಸರ್’ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಇನ್ನೇನು ಅರ್ಧಶತಕ ಸಿಡಿಸಬಹುದು ಎನ್ನುವಾಗಲೇ ಹ್ಯಾಜಲ್’ವುಡ್ ಬೌಲಿಂಗ್’ನಲ್ಲಿ ಕೀಪರ್ ಪೈಯ್ನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಇದೀಗ ಪೂಜಾರ 11 ಹಾಗೂ ಕೊಹ್ಲಿ 2 ರನ್ ಬಾರಿಸಿದ್ದಾರೆ. ಈ ಜೋಡಿ ಉತ್ತಮ ಜತೆಯಾಟ ನಿರ್ವಹಿಸಿದರೆ ಆಸಿಸ್ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಬಹುದು.

ಸಂಕ್ಷಿಪ್ತ ಸ್ಕೋರ್:
ಭಾರತ: 250 & 88/2*
ಆಸ್ಟ್ರೇಲಿಯಾ: 235/10
[* ವಿವರ ಅಪೂರ್ಣ]