ಬೆಂಗಳೂರು[ನ.03]: ಟೆಸ್ಟ್ ಹಾಗೂ ಏಕದಿನ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಇದೀಗ ಚುಟುಕು ಕ್ರಿಕೆಟ್’ನಲ್ಲೂ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ. ನವೆಂಬರ್ 4ರಿಂದ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ಆರಂಭವಾಗಲಿರುವ ಟಿ20 ಸರಣಿಯಲ್ಲಿ ರೋಹಿತ್ ಪಡೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಗೆದ್ದುಕೊಂಡಿದ್ದ ಭಾರತ, 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಅಂತರದಲ್ಲಿ ಜಯಭೇರಿ ಬಾರಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಇನ್ನು ಟಿ20 ಮಾದರಿಯಲ್ಲಿ ಬಲಿಷ್ಠವಾಗಿರುವ ಕೆರಿಬಿಯನ್ನರು ಟೀಂ ಇಂಡಿಯಾಗೆ ತಿರುಗೇಟು ನೀಡಲು ಸಜ್ಜಾಗಿದೆ.

ಇಂಡೋ-ವಿಂಡೀಸ್ ಟಿ20 ಫೈಟ್’ನಲ್ಲಿ ಪ್ರಮುಖ 5 ದಾಖಲೆಗಳು ನಿರ್ಮಾಣವಾಗಿದ್ದು, ಅವರೂಪದ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

#5. ಸಾವಿರ ರನ್ ಹೊಸ್ತಿಲಲ್ಲಿ ಶಿಖರ್ ಧವನ್:


ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಇತ್ತೀಚೆಗಷ್ಟೇ ಮುಕ್ತಾಯವಾದ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ಹೊಡಿಬಡಿಯಾಟಕ್ಕೆ ಹೆಸರಾದ ಧವನ್ ಯಾವಾಗ ಬೇಕಾದರೂ ಕಮ್’ಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಕ್ರಿಕೆಟ್’ನಲ್ಲಿ ತನ್ನದೇಯಾದ ಖದರ್ ಹೊಂದಿರುವ ಧವನ್ ಸಾವಿರ ರನ್ ಪೂರೈಸುವ ಹೊಸ್ತಿಲಲ್ಲಿ ಇದ್ದಾರೆ. ಇನ್ನು ಕೇವಲ 23 ರನ್ ಬಾರಿಸಿದರೆ, ಧವನ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್’ನಲ್ಲಿ ರೈನಾ, ಕೊಹ್ಲಿ, ಯುವರಾಜ್ ಸಿಂಗ್, ಧೋನಿ, ರೋಹಿತ್ ಬಳಿಕ ಈ ಸಾಧನೆ ಮಾಡಿದ 6ನೇ ಭಾರತೀಯ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನವಾಗಲಿದ್ದಾರೆ.

#4. 50ರ ಗಡಿ ತಲುಪಲು ಬುಮ್ರಾಗೆ ಬೇಕು 7 ವಿಕೆಟ್


ಏಕದಿನ ಕ್ರಿಕೆಟ್’ನ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ಸ್ಥಿರ ಲೈನ್ ಅಂಡ್ ಲೆಂಗ್ತ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್ ತಬ್ಬಿಬ್ಬುಗೊಳಿಸುತ್ತಿದ್ದಾರೆ. ಅದರಲ್ಲೂ ಡೆತ್ ಓವರ್’ಗಳಲ್ಲಿ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ವಿಕೆಟ್ ಕಬಳಿಸುವ ಬುಮ್ರಾ ಇನ್ನು 7 ವಿಕೆಟ್ ಕಬಳಿಸಿದರೇ ಟಿ20 ಕ್ರಿಕೆಟ್’ನಲ್ಲಿ 50 ವಿಕೆಟ್ ಕಬಳಿಸಿದ ಸಾಧನೆ ಮಾಡಲಿದ್ದಾರೆ. 24 ವರ್ಷದ ಬುಮ್ರಾ ಇದೀಗ 43 ವಿಕೆಟ್ ಕಬಳಿಸಿದ್ದು ಈ ಸರಣಿಯಲ್ಲಿ ಇನ್ನು 7 ವಿಕೆಟ್ ಕಬಳಿಸಿದರೇ ಆರ್. ಅಶ್ವಿನ್[52] ಬಳಿಕ 50 ವಿಕೆಟ್ ಪೂರೈಸಿದ ಭಾರತದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ಬುಮ್ರಾ ಪಾತ್ರವಾಗಲಿದ್ದಾರೆ.

#3. ನೂರರ ಗಡಿ ಮುಟ್ಟಲು ಹಿಟ್’ಮ್ಯಾನ್’ಗೆ ಬೇಕಿದೆ 11 ಸಿಕ್ಸರ್


ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಲಿರುವ ರೋಹಿತ್ ಶರ್ಮಾ ಮತ್ತೊಂದು ಇತಿಹಾಸ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 16 ಸಿಕ್ಸರ್ ಸಿಡಿಸುವ ಮೂಲಕ ಅತಿವೇಗವಾಗಿ 200 ಸಿಕ್ಸರ್ ಸಿಡಿಸಿದ ಎನ್ನುವ ಕೀರ್ತಿಗೆ ಪಾತ್ರವಾಗಿದ್ದ ರೋಹಿತ್ ಟಿ20 ಕ್ರಿಕೆಟ್’ನಲ್ಲೂ ಆರ್ಭಟಿಸುವ ಸಾಧ್ಯತೆಯಿದೆ. 31 ವರ್ಷದ ರೋಹಿತ್ ಇನ್ನು ಕೇವಲ 11 ಸಿಕ್ಸರ್ ಸಿಡಿಸಿದರೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಮೊದಲು ಕ್ರಿಸ್ ಗೇಲ್ ಹಾಗೂ ಮಾರ್ಟಿನ್ ಗಪ್ಟೀಲ್ 100 ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.

#2. 2011ರ ಬಳಿಕ ಚೊಚ್ಚಲ ಟಿ20 ಗೆಲುವಿನ ಕನವರಿಕೆಯಲ್ಲಿ ಭಾರತ


ಭಾರತ-ವೆಸ್ಟ್ ಇಂಡೀಸ್ ತಂಡಗಳು ಟಿ20 ಕ್ರಿಕೆಟ್’ನಲ್ಲಿ ಇದುವರೆಗೆ ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ವಿಂಡೀಸ್ 2 ಬಾರಿ ಗೆಲುವಿನ ನಗೆ ಬೀರಿದೆ. ಇದೇ ಮೊದಲ ಬಾರಿಗೆ ಉಭಯ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಾಡಲು ಸಜ್ಜಾಗಿವೆ. 2011ರಲ್ಲಿ ಟಿ20 ಸರಣಿ ಗೆದ್ದಿದ್ದ ಭಾರತ, 2016ರಲ್ಲಿ 2 ಪಂದ್ಯಗಳ ಸರಣಿಯಲ್ಲಿ ಕೆರಿಬಿಯನ್ನರು ರೋಚಕ ಜಯ ಸಾಧಿಸಿದ್ದರು. ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ವಿಂಡೀಸ್ ಟಿ20 ಸರಣಿಯಾಡಲು ಸಜ್ಜಾಗಿದೆ.

#1. ಟಿ20 ಗರಿಷ್ಠ ರನ್ ಬಾರಿಸಿದ ಆಟಗಾರನಾಗುವತ್ತ ರೋಹಿತ್


ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಲು ರೋಹಿತ್ ಶರ್ಮಾಗೆ ಸುವರ್ಣಾವಕಾಶವಿದೆ. ಪ್ರಸ್ತುತ ಶರ್ಮಾ 84 ಇನ್ನಿಂಗ್ಸ್’ಗಳಲ್ಲಿ 2086 ರನ್ ಬಾರಿಸಿದ್ದ ಗರಿಷ್ಠ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಮಾರ್ಟಿನ್ ಗಪ್ಟಿಲ್ ದಾಖಲೆ ಅಳಿಸಿಹಾಕಲು ರೋಹಿತ್’ಗೆ ಇನ್ನು ಕೇವಲ 185 ರನ್’ಗಳು ಬೇಕಿವೆ. ಏಕದಿನ ಕ್ರಿಕೆಟ್’ನಲ್ಲಿ ಅಬ್ಬರಿಸಿರುವ ರೋಹಿತ್ ಟಿ20ಯಲ್ಲೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.