ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ತಯಾರಿಯ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರಗಳು ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯ ಹಂತ ಟಿ20 ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತವರಿನಲ್ಲಿ ಆಡಲಿರುವ ಅತ್ಯಂತ ಮಹತ್ವದ ಟಿ20 ಸರಣಿ ಇದಾಗಿದ್ದು, ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಭಾರತ ತಂಡವು ಕಣಕ್ಕಿಳಿಯುತ್ತಿದೆ.
ದಕ್ಷಿಣ ಆಫ್ರಿಕಾ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬೀಗಿತ್ತು. ಆದರೆ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸುವ ಮೂಲಕ ಹರಿಣಗಳ ಪಡೆಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಎಲ್ಲರ ಚಿತ್ತ ಐದು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿಯ ಮೇಲೆ ನೆಟ್ಟಿದೆ. ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಶುಭ್‌ಮನ್ ಗಿಲ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಮುಂಬರುವ ಫೆಬ್ರವರಿ 07ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುವ ನಿಟ್ಟಿನಲ್ಲಿ ಈ ಸರಣಿಯನ್ನು ಬಳಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ.
ಭಾರತ-ದಕ್ಷಿಣ ಆಫ್ರಿಕಾ ಸರಣಿಯ ಲೈವ್ ಸ್ಟೀಮಿಂಗ್ ಡೀಟೈಲ್ಸ್:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೇ ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ವೀಕ್ಷಿಸಬಹುದಾಗಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ
ಮೊದಲ ಟಿ20-ಬಾರಬತಿ ಸ್ಟೇಡಿಯಂ, ಕಟಕ್ (ಡಿಸೆಂಬರ್ 09)
ಎರಡನೇ ಟಿ20- ಮಹರಾಜ ಯದುವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ನ್ಯೂ ಚಂಡಿಘಡ್(ಡಿಸೆಂಬರ್ 11)
ಮೂರನೇ ಟಿ20- HPCA ಸ್ಟೇಡಿಯಂ, ಧರ್ಮಶಾಲಾ (ಡಿಸೆಂಬರ್ 14)
ನಾಲ್ಕನೇ ಟಿ20 - ಏಕಾನ ಕ್ರಿಕೆಟ್ ಸ್ಟೇಡಿಯಂ, ಲಖನೌ(ಡಿಸೆಂಬರ್ 17)
ಐದನೇ ಟಿ20- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್(ಡಿಸೆಂಬರ್ 19)
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿದೆ:
ಭಾರತ: ಸೂರ್ಯಕುಮಾರ್ ಯಾದವ್(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ: ಏಯ್ಡನ್ ಮಾರ್ಕ್‌ರಮ್(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ಡೆವಾಲ್ಡ್ ಬ್ರೆವೀಸ್, ಕೇಶವ್ ಮಹರಾಜ್, ಮಾರ್ಕೊ ಯಾನ್ಸನ್, ಟ್ರಿಸ್ಟಿನ್ ಸ್ಟಬ್ಸ್, ಲುಂಗಿ ಎಂಗಿಡಿ, ಏನ್ರಿಚ್ ನೊಕಿಯಾ, ಕಾರ್ಬಿನ್ ಬಾಶ್.


