Commonwealth Games: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಸುಧೀರ್: ಅಭಿನಂದಿಸಿದ ಪ್ರಧಾನಿ ಮೋದಿ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಪ್ಯಾರಾ ಪವರ್‌ಲಿಫ್ಟರ್‌ ಸುಧೀರ್
ಭಾರತದ ಪಾಲಾದ 6ನೇ ಚಿನ್ನದ ಪದಕ
ಸುಧೀರ್ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Commonwealth Games 2022 Sudhir wins 6th gold for India PM Modi Congratulates his Achievements kvn

ಬರ್ಮಿಂಗ್‌ಹ್ಯಾಮ್‌(ಆ.05): ಭಾರತದ ಪ್ಯಾರಾ ಪವರ್‌ಲಿಫ್ಟರ್ ಸುಧೀರ್, 212 kg ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ತಡರಾತ್ರಿ ನಡೆದ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಎರಡನೇ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ 134.5 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಧೀರ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಸುಧೀರ್ ಭಾರತಕ್ಕೆ ಆರನೇ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ ಹೆವಿವೇಟ್‌ ವಿಭಾಗದ ಪ್ಯಾರಾ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸುಧೀರ್, ಹೊಸ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. ಹರ್ಯಾಣದ ಸೋನೆಪತ್ ಮೂಲದವರಾದ ಸುಧೀರ್, 212 kg ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.

ಇದು ಕಾಮನ್‌ವೆಲ್ತ್‌ ಗೇಮ್ಸ್‌ ಇತಿಹಾಸದಲ್ಲಿ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತ ಜಯಿಸಿದ ಮೊದಲ ಪದಕವೆನಿಸಿದೆ. ಸುಧೀರ್ ಪದಕ ಗೆದ್ದ ಬೆನ್ನಲ್ಲೇ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. '2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸುಧೀರ್ ಮೂಲಕ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಉತ್ತಮ ಆರಂಭ ಲಭಿಸಿದೆ. ಅವರು ಈ ಗೇಮ್ಸ್‌ನಲ್ಲಿ ಪ್ರತಿಷ್ಠಿತ ಚಿನ್ನದ ಪದಕ ಜಯಿಸುವ ಮೂಲಕ ತಮ್ಮ ಕ್ರೀಡಾಬದ್ದತೆ ಹಾಗೂ ಸಮರ್ಪಣಾ ಭಾವವನ್ನು ಮೆರೆದಿದ್ದಾರೆ. ಅವರು ಸತತವಾಗಿ ಫೀಲ್ಡ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಸುಧೀರ್ ಅವರಿಗೆ ಅಭಿನಂದನೆಗಳು ಹಾಗೂ ಅವರ ಭವಿಷ್ಯ ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.  

ಇನ್ನು ಚಿನ್ನದ ಪದಕ ಜಯಿಸಿದ ಬಳಿಕ ಮಾತನಾಡಿರುವ ಸುಧೀರ್, ತಾವು ಲಂಡನ್‌ ಸಿಟಿಯನ್ನು ನೋಡಬೇಕು ಹಾಗೂ ಶಾಪಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಹಾಗೂ ಫೈನಲ್‌ ವೇಳೆ ನೆರದಿದ್ದ ಪ್ರೇಕ್ಷಕರ ಪ್ರೋತ್ಸಾಹ ಕೂಡಾ ಉತ್ತಮವಾಗಿತ್ತು ಎಂದು ಹೇಳಿದ್ದಾರೆ. ನಾನು ಈ ಬಾರಿ ಚಿನ್ನದ ಪದಕ ಗೆಲ್ಲುತ್ತೇನೆ ಎಂದು ಅಂದುಕೊಂಡಿದ್ದೆ. ಅದಕ್ಕಾಗಿ ನಾನು ಒಳ್ಳೆಯ ಸಿದ್ದತೆಗಳನ್ನು ಮಾಡಿಕೊಂಡಿದ್ದೆ. ನಾನು ಬರ್ಮಿಂಗ್‌ಹ್ಯಾಮ್‌ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಸಿದ್ದತೆ ಉತ್ತಮವಾಗಿತ್ತು. ವಾತಾವರಣ ಕೂಡಾ ಚೆನ್ನಾಗಿತ್ತು. ನೆರೆದಿದ್ದ ಪ್ರೇಕ್ಷಕರು ಕೂಡಾ ಒಳ್ಳೆಯ ರೀತಿಯಲ್ಲಿ ಹುರಿದುಂಬಿಸಿದರು ಎಂದು ಒಲಿಂಪಿಕ್ಸ್‌ ವೆಬ್‌ಸೈಟ್‌ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

Commonwealth Games 2022: ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದು ಚರಿತ್ರೆ ನಿರ್ಮಿಸಿದ ಮುರುಳಿ ಶ್ರೀಶಂಕರ್

ಈಗ ಪದಕ ಗೆದ್ದಾಗಿದೆ. ಇನ್ನೇನಿದ್ದರೂ ಸಂಭ್ರಮಾಚರಣೆ ಮಾಡುವ ಸಮಯ. ನಾನು ಲಂಡನ್‌ಗೆ ಹೋಗುತ್ತೇನೆ. ಅಲ್ಲಿನ ನಗರವನ್ನು ನೋಡಬೇಕು ಹಾಗೂ ಕೆಲವೊಂದು ಶಾಪಿಂಗ್‌ ಮಾಡಬೇಕೆಂದಿದ್ದೇನೆ ಎಂದು ಸುಧೀರ್ ಹೇಳಿದ್ದಾರೆ.

ಸುಧೀರ್ 2013ರಿಂದ ಪಾಣಿಪತ್‌ನಲ್ಲಿ ಪ್ಯಾರಾ ಪವರ್‌ಲಿಫ್ಟಿಂಗ್‌ ಮಾಡುವುದನ್ನು ಆರಂಭಿಸಿದರು. ಇದಾದ ಬಳಿಕ ಸುಧೀರ್ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಕಳೆದ ಜೂನ್‌ನಲ್ಲಿ ಸೌತ್ ಕೂರಿಯಾದಲ್ಲಿ ನಡೆದ ಏಷ್ಯಾ-ಒಸೆನಿಯಾ ಓಪನ್‌ ಚಾಂಪಿಯನ್‌ಶಿಪ್‌ನ 88 ಕೆಜಿ ವಿಭಾಗದ ಪವರ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿ ಕಂಚಿನ ಪದಕ ಜಯಿಸಿದ್ದರು.

Latest Videos
Follow Us:
Download App:
  • android
  • ios