Commonwealth Games 2022: ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದು ಚರಿತ್ರೆ ನಿರ್ಮಿಸಿದ ಮುರುಳಿ ಶ್ರೀಶಂಕರ್

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪಾಲಾದ ಮತ್ತೊಂದು ಪದಕ
ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಮುರುಳಿ ಶ್ರೀಶಂಕರ್
ಲಾಂಗ್‌ಜಂಪ್ ಫೈನಲ್ ನಲ್ಲಿ 8.08 ಮೀಟರ್ ದೂರ ಜಿಗಿದು ಮುರುಳಿ ಶ್ರೀಶಂಕರ್‌ಗೆ ಬೆಳ್ಳಿ

Commonwealth Games 2022 Murali Sreeshankar wins long jump Silver scripts history for India kvn

ಬರ್ಮಿಂಗ್‌ಹ್ಯಾಮ್‌(ಆ.05): ಭಾರತದ ಯುವ ಲಾಂಗ್‌ಜಂಪ್ ಪಟು ಮುರುಳಿ ಶ್ರೀಶಂಕರ್, ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೇರಳದ ಪಾಲಕ್ಕಾಡ್ ಮೂಲದ 23 ವರ್ಷದ ಶ್ರೀಶಂಕರ್, ಕಾಮನ್‌ವೆಲ್ತ್ ಗೇಮ್ಸ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಪದಕ ಬೆಳ್ಳಿ ಗೆದ್ದ ಭಾರತದ ಮೊದಲ ಪುರುಷ ಅಥ್ಲೀಟ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಲಾಂಗ್‌ಜಂಪ್ ಫೈನಲ್ ಪಂದ್ಯದಲ್ಲಿ 8.08 ಮೀಟರ್ ದೂರ ಜಿಗಿಯುವ ಮೂಲಕ ಮುರುಳಿ ಶ್ರೀಶಂಕರ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಮುರುಳಿ ಶ್ರೀಶಂಕರ್, ಸುರೇಶ್ ಬಾಬು ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು 1978ರಲ್ಲಿ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸುರೇಶ್ ಬಾಬು ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಆದರೆ ಇದೀಗ ಮುರುಳಿ ಶ್ರೀಶಂಕರ್ ಬೆಳ್ಳಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಭಾರತದವರೇ ಆದ ಮತ್ತೋರ್ವ ಲಾಂಗ್‌ಜಂಪ್ ಪಟು ಮೊಹಮ್ಮದ್ ಅನೀಸ್ 7.97 ಮೀಟರ್ ದೂರ ಜಿಗಿಯುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ ಸ್ಪರ್ಧೆಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 

ಇನ್ನುಳಿದಂತೆ ಬಹಮಾಸ್ ದೇಶದ ಲಖೌನ್ ನೈರನ್‌ ಎರಡನೇ ಪ್ರಯತ್ನದಲ್ಲೇ 8.08 ಮೀಟರ್ ದೂರ ಜಿಗಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮುರುಳಿ ಶ್ರೀಶಂಕರ್ ತಮ್ಮ ಐದನೇ ಪ್ರಯತ್ನದಲ್ಲೇ 8.08 ಮೀಟರ್ ದೂರ ಜಿಗಿದಿದ್ದರು. 12 ಲಾಂಗ್‌ಜಂಪ್‌ ಪಟುಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಮುರುಳಿ ಶ್ರೀಶಂಕರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 

Commonwealth Games: ಹೈಜಂಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್

ಅಪೆಂಡಿಕ್ಸ್‌ನಿಂದಾಗಿ ಗೋಲ್ಡ್‌ ಕೋಸ್ಟ್ ಗೇಮ್ಸ್ ಮಿಸ್ ಮಾಡಿಕೊಂಡಿದ್ದ ಶ್ರೀಶಂಕರ್:  ಮುರುಳಿ ಶ್ರೀಶಂಕರ್, 2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದ ಶ್ರೀಶಂಕರ್‌ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ ಮಿಸ್ ಮಾಡಿಕೊಂಡಿದ್ದರು. ರಾಷ್ಟ್ರೀಯ ದಾಖಲೆ ಒಡೆಯರಾಗಿರುವ ಮುರುಳಿ ಶ್ರೀಶಂಕರ್ ಕೇವಲ ಒಂದು ಸೆಂಟಿಮೀಟರ್ ಅಂತರದಲ್ಲಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದರು.

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಭಾರತ ಜಯಿಸಿದ ಎರಡನೇ ಪದಕ ಇದಾಗಿದೆ. ಈ ಮೊದಲು ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶ್ರೀಶಂಕರ್ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಮುರುಳಿ ಶ್ರೀಶಂಕರ್‌ 2022ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮುರುಳಿ ಶ್ರೀಶಂಕರ್ 8.36 ಮೀಟರ್ ದೂರ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಆದರೆ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಪ್ರತಿಕೂಲ ವಾತಾವರಣವಿದ್ದಿದ್ದರಿಂದಾಗಿ ಮುರುಳಿ ಶ್ರೀಶಂಕರ್‌ಗೆ ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ.

Latest Videos
Follow Us:
Download App:
  • android
  • ios